ಬ್ಯಾಡಗಿ ತಾಲೂಕು ಬರಗಾಲ ಪ್ರದೇಶವೆಂದು ಘೊಷಿಸಿ

Raita Sangha byadagi
Published on

ಬ್ಯಾಡಗಿ: ಮುಂಗಾರು ಮಳೆ ವಿಫಲ ಹಾಗೂ ಮಳೆ ಕೊರತೆಯಿಂದ ಬಿತ್ತದ ಬೆಳೆಗಳೆಲ್ಲ ಒಣಗುತ್ತಿವೆ. ರೈತರಲ್ಲಿ ಆತಂಕ ಹೆಚ್ಚಾಗುತ್ತಿದ್ದು, ಸರ್ಕಾರ ಬ್ಯಾಡಗಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೊಷಿಸುವಂತೆ ತಾಲೂಕು ರೈತ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರಾಜ್ಯದ ವಿವಿಧೆಡೆ ಮಳೆ ಸಮರ್ಪಕವಾಗಿ ಆಗಿಲ್ಲ. 130 ತಾಲೂಕುಗಳು ಬರಗಾಲ ಪಟ್ಟಿಯಲ್ಲಿವೆ. ತಾಲೂಕಿನ ಬ್ಯಾಡಗಿ, ಕಾಗಿನೆಲೆ ಎರಡೂ ಹೋಬಳಿಗಳಲ್ಲಿ ರೈತರು ಬೆಳೆಯಿಲ್ಲದೆ ಆತಂಕ ಎದುರಿಸುವಂತಾಗಿದೆ. 32 ಸಾವಿರ ಹೆಕ್ಟೇರ್ ಬಿತ್ತನೆಯಲ್ಲಿ ಬಹುತೇಕ ರೈತರು ಬಿತ್ತನೆ ಮಾಡಿಲ್ಲ. ಎರಡು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಲ್ಲಿ ಸಿಲುಕಿದ ರೈತರಿಗೆ ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನ ಹಾಗೂ ಜಾನುವಾರುಗಳಿಗೆ ನೀರಿನ ಕೊರತೆಯಾಗಿದೆ. ರೈತರಿಗೆ ಕೂಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದು, ಇತ್ತ ಮಳೆಯೂ ಇಲ್ಲ, ಬಿತ್ತನೆಯೂ ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಧಿಕಾರಿ ಸರ್ಕಾರಕ್ಕೆ ಮಳೆ ಕೊರತೆಯ ವರದಿ ಕಳುಹಿಸಿ, ಬರಗಾಲ ಘೊಷಣೆ ಮಾಡಲು ಶಿಫಾರಸು ಮಾಡಬೇಕು. ಸ್ಥಳೀಯ ಶಾಸಕರು ಸರ್ಕಾರಕ್ಕೆ ಒತ್ತಾಯಿಸುವಂತೆ ಆಗ್ರಹಿಸಿದರು.

ಬಳಿಕ ಶಿರಸ್ತೇದಾರ್ ನಾಗರತ್ಮಾ ಕಾಳೆ ಅವರಿಗೆ ಮನವಿ ಸಲ್ಲಿಸಿದರು.

ನಿಂಗಪ್ಪ ಮಾಗೋಡ, ಚನ್ನಬಸಪ್ಪ ಸಂಕಣ್ಣನವರ, ಗೋಣೆಪ್ಪ ಸಂಕಣ್ಣವನರ ಚನ್ನಬಸಪ್ಪ ಕಲಕಟ್ಟಿ, ರಾಜಣ್ಣ ವೀರನಗೌಡ್ರ, ರುದ್ರಪ್ಪ ಹೊಸಮನಿ, ಐ.ಎಚ್. ಹಾವೇರಿ, ಬಸವಂತಪ್ಪ ದಾಸರ, ಶಿವಣ್ಣ ರೆಡ್ಡಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net