

ಶಿರಸಿ: ಉತ್ತರ ಕನ್ನಡ ಜಿಲ್ಲೆಯನ್ನು ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಡೀ ಉತ್ತರ ಕನ್ನಡದಲ್ಲಿ ಉಕ್ಕಿ ಹರಿಯಬೇಕಿದ್ದ ಹಳ್ಳ ಕೊಳ್ಳಗಳು ಬತ್ತುತ್ತಿವೆ. ಭತ್ತದ ಬೇಸಾಯಕ್ಕೆ ಸಂಕಷ್ಟ ಎದುರಾಗಿದೆ. ಕೆಲವು ಕಡೆ ಬಾವಿ ನೀರೂ ಇಳಿದಿದೆ. ಕಳೆದ ಜೂನ್‌ನಿಂದ ಸರಿಯಾಗಿ ಮಳೆ ಆಗಿಲ್ಲ. ಈ ಕಾರಣದಿಂದ ನವೆಂಬರ್ ವೇಳೆಗೆ ಬದುಕು ಬೇಸಾಯ ಎರಡಕ್ಕೂ ಇನ್ನಷ್ಟು ಜಲದ ತುಟಾಗ್ರತೆ ಆಗಬಹುದಾಗಿದೆ.
ಶೇ.20ಕ್ಕಿಂತ ಕಡಿಮೆ ಮಳೆ ಬಿದ್ದು, ಬರಗಾಲ ಸೃಷ್ಟಿಗೆ ಕಾರಣವಾಗಿದೆ. ರೈತರ, ಜನ ಜಾನುವಾರುಗಳಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಬೇಕು. ಶಿರಸಿ- ಸಿದ್ದಾಪುರ ಸೇರಿದಂತೆ ಎಲ್ಲಡೆ ಭತ್ತದ ಕೃಷಿ ಕೂಡ ಮಾಡಲಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಆದರೂ, ನಾಟಿಗೆ ಹಾಕಿದ ಮಡಿಯೂ ಒಣಗಿದೆ. ಇನ್ನೊಂದಡೆ ಅಡಕೆಗೆ ಎಲೆ ಚುಕ್ಕೆ ರೋಗ ಕೂಡ ದ್ವಿಗುಣ ಆಗುತ್ತಿದೆ. ಜಿಲ್ಲೆಯಲ್ಲಿ ಜನ ಜಾನುವಾರುಗಳಿಗೆ ಕೂಡ ಕುಡಿಯುವ ನೀರಿಗೂ ಸಮಸ್ಯೆ ಆಗುವ ಆತಂಕವಿದೆ. ಈ ಕಾರಣದಿಂದ ಶಿರಸಿ- ಸಿದ್ದಾಪುರ ಸೇರಿದಂತೆ ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.