

ಪಡುಬಿದ್ರಿ: ಹೈಕೋರ್ಟ್ ತಡೆಯಾಜ್ಞೆಯಿಂದ ಫಲಿತಾಂಶ ತಡೆಹಿಡಿಯಲ್ಪಟ್ಟ ನೂತನ ಕಾಪು ತಾಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಘೋಷಣೆ ನ.3ರಂದು ನಡೆಯಲಿದೆ.
ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಆ.10ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಹೈಕೋರ್ಟ್ ಮುಂದಿನ ಆದೇಶವರೆಗೆ ಫಲಿತಾಂಶ ಘೋಷಿಸದಂತೆ ಅಂದು ತಡೆಯಾಜ್ಞೆ ನೀಡಿತ್ತು. ಬಳಿಕ ವಿಚಾರಣೆ ನಡೆದು ಫಲಿತಾಂಶ ಘೋಷಣೆಗೆ ನ್ಯಾಯಾಲಯ ಅ.20ರಂದು ಅಂತಿಮ ಆದೇಶ ನೀಡಿತ್ತು. ಅದರಂತೆ ನ.3ರಂದು ಕಾಪು ಪುರಸಭೆ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸದಸ್ಯರಿಗೆ ಉಪವಿಭಾಗಾಧಿಕಾರಿ ತಿಳಿವಳಿಕೆ ಪತ್ರ ರವಾನಿಸಿದ್ದಾರೆ.
ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಶಿಪ್ರಭಾ ಶೆಟ್ಟಿ ಮತ್ತು ಕಾಂಗ್ರೆಸ್‌ನಿಂದ ರೇಣುಕಾ ಪುತ್ರನ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೇಶವ ಮೊಯ್ಲಿ, ಕಾಂಗ್ರೆಸ್‌ನಿಂದ ಯು. ಸಿ. ಶೇಖಬ್ಬ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ರೇಣುಕಾ ಹೊರತು ಉಳಿದವರ ನಾಮಪತ್ರ ಅಂಗೀಕೃತವಾಗಿತ್ತು.