ಜೀವ ಸಾರ್ಥಕತೆಯ 5ನೇ ವಲಯವಾಗಿ ಮೈಸೂರು ವಿಭಾಗ ಘೋಷಣೆ

9 - Copy
Published on

ಮೈಸೂರು: ಸ್ಥಳೀಯವಾಗಿ ಅಂಗಾಂಗ ಕಸಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಜೀವ ಸಾರ್ಥಕತೆ)ಯ 5ನೇ ವಲಯವಾಗಿ ಮೈಸೂರು ವಿಭಾಗವನ್ನು ಘೋಷಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಕಿರಣ್‌ಕುಮಾರ್ ತಿಳಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಜೀವ ಸಾರ್ಥಕತೆ) ಹಾಗೂ ಅಪೋಲೋ ಬಿಜಿಎಸ್ ಆಸ್ಪತ್ರೆ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಭದಲ್ಲಿ ಬುಧವಾರ ಆಯೋಜಿಸಿದ್ದ ‘ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಜೀವ ಸಾರ್ಥಕತೆ)ಯ 5ನೇ ವಲಯ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರು, ಹಾಸನ, ಮಂಡ್ಯ, ಕೊಡಗು, ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅಂಗಾಂಗ ಕಸಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೈಸೂರನ್ನು ಇನ್ನು ಮುಂದೆ ಜೀವ ಸಾರ್ಥಕತೆಯ ಅಡಿಯಲ್ಲಿ ಐದನೇ ವಲಯ ಎಂದು ಪರಿಗಣಿಸಲಾಗುತ್ತಿದೆ ಎಂದರು.

ಪ್ರಸ್ತುತ ಕಲಬುರಗಿ, ಹುಬ್ಬಳ್ಳಿ, ಮಂಗಳೂರು ಮತ್ತು ಬೆಂಗಳೂರು ಎಂಬ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಸದ್ಯ ಹಾಸನ ಮಂಡ್ಯ, ಕೊಡಗು, ಚಿಕ್ಕಮಗಳೂರು ಮತ್ತು ಮೈಸೂರು ರೋಗಿಗಳು ಡಿಎಸ್‌ಎ ಕ್ರಾಸ್‌ಮ್ಯಾಚ್‌ಗಾಗಿ ಬೆಂಗಳೂರಿಗೆ ತೆರಳಬೇಕಿತ್ತು. ಇದಕ್ಕಾಗಿ ಸಮಯವನ್ನೂ ಹೆಚ್ಚಾಗಿ ವ್ಯಯಿಸಬೇಕಾಗಿತ್ತು. ಏಳನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾಡಿದ ನಿರ್ಣಯದಂತೆ ಮೈಸೂರಿಗೆ ಸಿಗುತ್ತಿರುವ ಐದನೇ ವಲಯ ಸ್ಥಾನಮಾನವು ರೋಗಿಗಳ ಸಮಯ ಉಳಿಸಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯವಾಗಿ ಅಂಗಾಂಗ ದಾನವನ್ನೂ ಉತ್ತೇಜಿಸುತ್ತದೆ ಎಂದರು.

ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ವಿಭಾಗ ಮುಖ್ಯಸ್ಥ ಎನ್.ಜಿ.ಭರತೀಶ ರೆಡ್ಡಿ ಮಾತನಾಡಿ, ಹಾಸನ, ಮಂಡ್ಯ, ಕೊಡಗು, ಚಾಮರಾಜನಗರ ಮತ್ತು ಮೈಸೂರಿನಲ್ಲಿ ಅಂಗಾಂಗ ಕಸಿ ಚಟುವಟಿಕೆಗಳನ್ನು ಉತ್ತೇಜಿಸುವುದು. ಅಂಗಾಂಗ ಕಸಿ ಹಂಚಿಕೆಯನ್ನು ನೋಂದಾಯಿತ ಮತ್ತು ವಲಯದೊಳಗೆ ಇರುವ ಸ್ಥಳೀಯ ಕಸಿ ಕೇಂದ್ರದ ರೋಗಿಗಳಿಗೆ ನೀಡಲು ಇದು ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯು ಕ್ರಾಸ್-ಮ್ಯಾಚಿಂಗ್ ಸೌಲಭ್ಯವನ್ನು ಹೊಂದಿದೆ. ಆದ್ದರಿಂದ ಸ್ಥಳೀಯವಾಗಿ ಕ್ರಾಸ್ ಮ್ಯಾಚಿಂಗ್‌ಗೆ ಬೇಕಾದ ಸಮಯ ಉಳಿಯುತ್ತದೆ. ಇದು ಕಸಿ ಸಮಯದಲ್ಲಿ ನಿರ್ಣಾಯಕ. ಕ್ರಾಸ್‌ಮ್ಯಾಚ್ ಸೌಲಭ್ಯವನ್ನು ಸುಲಭಗೊಳಿಸಲು ಎಂಒಯುವನ್ನು ಅಪೋಲೊ ಜತೆ ಕಾರ್ಯಗತಗೊಳಿಸಲಾಗಿದೆ ಎಂದರು.

ನಿಷ್ಕ್ರಿಯ ಸಾವು ಸಮಿತಿಯ ಅಧ್ಯಕ್ಷ ಡಾ.ಚಿನ್ನದೊರೈ ಮಾತನಾಡಿ, ದೇಶದಲ್ಲಿ ವಿವಿಧ ಅಂಗಾಂಗಗಳ ಕೊರತೆಯಿಂದ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಮತ್ತೊಂದೆಡೆ ಅಂಗಾಂಗ ದಾನಕ್ಕೆ ಮೂಲವಾದ ಮಿದುಳು ಸಾವು (ಬ್ರೇನ್‌ಡೆತ್) ಕೂಡ ದೇಶದಲ್ಲೇ ಹೆಚ್ಚು. ಆದರೆ, ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಮತ್ತು ಮೌಢ್ಯದಿಂದ ದೇಹವು ಯಾವುದೇ ಬಗೆಯ ಪ್ರಯೋಜನಕ್ಕೆ ಒಳಗಾಗದೇ ಮಣ್ಣು, ಬೆಂಕಿಯಲ್ಲಿ ಲೀನವಾಗುತ್ತಿದೆ. ಆದ್ದರಿಂದ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

ಆರೋಗ್ಯವಂತ ಮನುಷ್ಯರ ಮೂತ್ರಪಿಂಡ, ಪಿತ್ತಜನಕಾಂಗ, ಹೃದಯ, ಕಣ್ಣು, ಶ್ವಾಸಕೋಶ ಸೇರಿದಂತೆ ಹಲವು ಅಂಗಗಳನ್ನು ಕಸಿ ಮಾಡುವ ವ್ಯವಸ್ಥೆ ದೇಶದಲ್ಲಿದೆ. ಒಬ್ಬ ವ್ಯಕ್ತಿ ಅಂಗಾಂಗ ದಾನಕ್ಕೆ ಒಳಗಾದರೆ ಕನಿಷ್ಠ ಐದು ಜೀವಗಳನ್ನು ಉಳಿಸಬಹುದು. ವೈದ್ಯಕೀಯ ಭಾಷೆಯಲ್ಲಿ ಮಿದುಳು ಸಾವನ್ನು ಕಂಡುಹಿಡಿಯಲು ವಿಶೇಷವಾದ ಮಾನದಂಡವಿದೆ. ಹೃದಯ ಬಡಿಯುತ್ತಿದ್ದರೂ, ನಾಡಿ ಮಿಡಿತವಿದ್ದರೂ, ಮಿದುಳು ಮೊದಲಿನಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಹೋದಾಗ ಸಾವನ್ನಪ್ಪಿದಂತೆ. ಕೆಲವೊಮ್ಮೆ ರೋಗಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದ್ದಾಗಲೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೆಂಟಿಲೇಟರ್ (ಜೀವರಕ್ಷಕ) ಅಳವಡಿಸಲಾಗಿರುತ್ತದೆ. ಇಂತಹ ಪ್ರಕರಣದಲ್ಲಿ ರೋಗಿ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ವೈದ್ಯರು ರೋಗಿಯ ಕುಟುಂಬದೊಂದಿಗೆ ಚರ್ಚೆ ನಡೆಸಿ ಅಂಗಾಂಗ ದಾನಕ್ಕೆ ಇಷ್ಟಪಟ್ಟರೆ ತಜ್ಞರ ಮಾರ್ಗದರ್ಶನದ ಮೇರೆಗೆ ಅಂಗಾಂಗ ದಾನ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ ಎಂದರು.

ಎಂಎಂಸಿ ಆ್ಯಂಡ್ ಆರ್‌ಐ ಡೀನ್ ಮತ್ತು ನಿರ್ದೇಶಕಿ ಡಾ.ದಾಕ್ಷಾಯಿಣಿ. ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್ ಕುಮಾರ್, ಯೋಜನೆಯ ನೋಡಲ್ ಅಧಿಕಾರಿ ಡಾ. ನಿರಂಜನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net