

ಹಾನಗಲ್ಲ: ತಾಲೂಕಿನಲ್ಲಿ ಮಳೆ ಕೊರತೆ, ಬೆಳೆ ಹಾನಿಯ ನೈಜ ಸ್ಥಿತಿಯ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆಯಾಗಿದ್ದು, ಮುಂದಿನ 10-15 ದಿನಗಳಲ್ಲಿ ಹಾನಗಲ್ಲ ಬರಪೀಡಿತ ತಾಲೂಕು ಘೊಷಣೆಯಾಗುವ ಭರವಸೆಯಿದೆ. ಈ ಬಗೆಗೆ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ತಾಲೂಕಿನ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಹಾನಗಲ್ಲ ಬರಪೀಡಿತ ತಾಲೂಕುಗಳ ಮೊದಲ ಪಟ್ಟಿಯಲ್ಲಿ ಸೇರಿಲ್ಲ. ಈಗಾಗಲೇ ಮುಖ್ಯಮಂತ್ರಿ, ಕೃಷಿ ಮತ್ತು ಕಂದಾಯ ಸಚಿವರು, ಇಲಾಖೆಗಳ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಲಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಶೇ. 77ರಿಂದ 81ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಶೀಘ್ರದಲ್ಲಿ ಬರಪೀಡಿತ ತಾಲೂಕು ಘೊಷಣೆಯಾಗಲಿದೆ ಎಂದರು.
ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಬರ ಪೀಡಿತ ತಾಲೂಕು ಪಟ್ಟಿಯಿಂದ ಹಾನಗಲ್ಲ ಸೇರಿದಂತೆ ಜಿಲ್ಲೆಯ ಶಿಗ್ಗಾಂವಿ, ಬ್ಯಾಡಗಿ ತಾಲೂಕನ್ನು ಹೊರಗಿಟ್ಟಿರುವುದು ಮಲತಾಯಿ ಧೋರಣೆಯಾಗಿದೆ. ಸರ್ಕಾರ ನಮ್ಮ ತಾಲೂಕನ್ನೂ ಬರಗಾಲ ಎಂದು ಘೊಷಣೆ ಮಾಡುವವರೆಗೂ ಶಾಸಕರಾದಿಯಾಗಿ ಯಾವ ಜನಪ್ರತಿನಿಧಿಗಳೂ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸದಂತೆ ಪ್ರತಿಭಟಿಸುವಂತೆ ರೈತಸಂಘದ ಜಿಲ್ಲಾ ಘಟಕ ಸೂಚನೆ ನೀಡಿದೆ. ಹೆಸ್ಕಾಂ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಈ ಮೊದಲು ಪ್ರಸ್ತಾವನೆ ಸಲ್ಲಿಸಿರುವ ಗ್ರಿಡ್ಗಳನ್ನು ಶಾಸಕರು ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಮಂಜೂರಾತಿಗೊಳಿಸಬೇಕು ಎಂದರು.
ರೈತ ಸಂಘದ ಅಧ್ಯಕ್ಷ ಎಂ.ಎಸ್. ಪಾಟೀಲ ಮಾತನಾಡಿ, 2019ರಲ್ಲಿ ಅತಿವೃಷ್ಟಿ ಪರಿಹಾರದ ಪ್ರಕರಣಗಳು ಇದುವರೆಗೆ ಇತ್ಯರ್ಥವಾಗಿಲ್ಲ, ಇನ್ನೂ ಪೊಲೀಸ್ ತನಿಖೆಯ ಹಂತದಲ್ಲಿವೆ. ಇದರಿಂದಾಗಿ ಸಾವಿರಾರು ರೈತರು ಪರಿಹಾರ ವಂಚಿತರಾಗಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಹನಿ ನೀರಾವರಿ ಯೋಜನೆ ಪ್ರತಿ ರೈತನಿಗೆ 7 ವರ್ಷಗಳಿಗೊಮ್ಮೆ ನಿಗದಿಗೊಳಿಸಿದೆ. ಇದನ್ನು 3 ವರ್ಷಗಳಿಗೆ ಕಡಿತಗೊಳಿಸಬೇಕು ಎಂದರು. ರೈತ ಸಂಘದ ಮತ್ತೋರ್ವ ಅಧ್ಯಕ್ಷ ರುದ್ರಪ್ಪ ಬಳಿಗಾರ ಮಾತನಾಡಿದರು.
ತಹಸೀಲ್ದಾರ್ ರವಿಕುಮಾರ ಕೊರವರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಮೋಹನಕುಮಾರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಹೆಸ್ಕಾಂ ಎಇಇ ಆನಂದ ಸುವರ್ಣಕರ, ರೈತ ಸಂಘಟನೆಗಳ ಪ್ರಮುಖರಾದ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ ಇನ್ನಿತರರು ಉಪಸ್ಥಿತರಿದ್ದರು.