

ಹುಣಸೂರು: ಹುಣಸೂರು ಉಪವಿಭಾಗ ವ್ಯಾಪ್ತಿಯ ಆದಿವಾಸಿಗಳಿಗೆ ಅನುಕೂಲವಾಗುವ ಅರಣ್ಯ ಹಕ್ಕು ಕಾಯ್ದೆ ಜಾರಿ ಮತ್ತು ಸತ್ಯಶೋಧನಾ ಸಮಿತಿ ಶಿಫಾರಸ್ಸನ್ನು ಸಮಗ್ರವಾಗಿ ಜಾರಿ ಮಾಡಬೇಕೆಂದು ಆಗ್ರಹಿಸಿ ಆದಿವಾಸಿಗಳು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ ತಮ್ಮ ಹಕ್ಕುಗಳಿಗಾಗಿ ಘೋಷಣೆಗಳನ್ನು ಕೂಗಿದರು.
ಗಿರಿಜನ ಸುರಕ್ಷಾ ವೇದಿಕೆಯ ಡಾ.ಗಣೇಶ್ ಮಾತನಾಡಿ, ಜಿಲ್ಲೆಯ 12,000 ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆ ಹಾಗೂ ಸತ್ಯಶೋಧನಾ ಸಮಿತಿ ಶಿಫಾರಸ್ಸಿನ ಅನ್ವಯ ಅರಣ್ಯ ಹಕ್ಕು ನೀಡಬೇಕು. ಹೈಕೋರ್ಟ್ ಆದೇಶದನ್ವಯ ಹಾಗೂ ಅಸ್ಸಾದಿ ವರದಿ ಶಿಫಾರಸ್ಸಿನಂತೆ 3418 ಅದಿವಾಸಿಗಳಿಗೆ ಪುನರ್ವಸತಿ ನೀಡಬೇಕು. ಅದಿವಾಸಿಗಳಿಗೆ ಒಳ ಮೀಸಲಾತಿ ನೀಡಬೇಕು. ಆದಿವಾಸಿಗಳು ಕೃಷಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ, ಹಕ್ಕುಪತ್ರ ಇರುವ ಕೃಷಿಭೂಮಿಗೆ ಪೋಡು ಮಾಡಿಕೊಡುವಂತೆ ಆಗ್ರಹಿಸಿದರು.
ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿ, ಆದಿವಾಸಿ ಪಾರ್ಲಿಮೆಂಟ್ ಕೈಗೊಂಡಿರುವ 18 ನಿರ್ಣಯಗಳನ್ನು ಸರ್ಕಾರ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿ, ಹುಣಸೂರಿನ 27 ಹಾಡಿಗಳಿಗೆ ಸಾಮೂಹಿಕ , ಆವಾಸ ಸ್ಥಾನಗಳ ಹಕು ್ಕನೀಡಬೇಕು. ಅಲ್ಲದೆ ತಿರಸ್ಕಾರವಾಗಿರುವ ಎಲ್ಲ ಅರ್ಜಿಗಳನ್ನು ಮರು ಪರಿಗಣಿಸಿ ಅರಣ್ಯ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.
ಕಾಡುವಡ್ಡರಗುಡಿ ಸರ್ವೇ ನಂಬರ್ 33ರ 117 ಎಕರೆ ಭೂಮಿಗೆ ಆದಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ತೆಕ್ಕಲ ಹಾಡಿ ಶಿವಣ್ಣ ಮತ್ತು ಮಾದಯ್ಯನ ಕಟ್ಟೆ ರಾಜು ಒತ್ತಾಯಿಸಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ನ.7ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲಾಗುವುದು. 15ರಂದು ವೀರನಹೊಸಹಳ್ಳಿ ಅರಣ್ಯದಲ್ಲಿನ ಮಂಟಳ್ಳಿ ಬಸವೇಶ್ವರ ಸನ್ನಿಧಿಯಲ್ಲಿ ಬಿರ್ಸಾ ಮುಂಡಾ ಜಯಂತಿ ಹಾಗು ಜನಜಾತಿಗೌರವ ದಿನ ಆಚರಣೆ ಹಾಗೂ 26ರಂದು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನೇರಳಕುಪ್ಪೆಯಲ್ಲಿ ಸಂಸದರು, ಶಾಸಕರು ಮಂತ್ರಿಗಳನ್ನ ಕರೆದು ಆದಿವಾಸಿ ಸಮಸ್ಯೆಗಳ ಕುರಿತು ಚರ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಮನವಿ ಸ್ವೀಕರಿಸಿದರು. ಅರಣ್ಯ ಹಕ್ಕು ಸಮಿತಿಗಳು, ಬುಡಕಟ್ಟು ಕೃಷಿಕರ ಸಂಘ, ಗಿರಿಜನ ಸುರಕ್ಷಾ ವೇದಿಕೆ ಸದಸ್ಯರು, ಮುಖಂಡರಾದ ಪ್ರಕಾಶ್, ಮಣಿಕಂಠ, ನಿರೋಜ, ಜಿ.ಟಿ.ರಾಜು ಮುಂತಾದವರು ಭಾಗವಹಿಸಿದ್ದರು.