ಸಿಬಿಐ ಪ್ರಕರಣ ವಾಪಸ್ ಸ್ವಾಗತಾರ್ಹ

JS
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧ 2019ರಲ್ಲಿ ಸಿಬಿಐಗೆ ವಹಿಸಲಾಗಿದ್ದ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆಯ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವುದನ್ನು ಸ್ವಾಗತಿಸುವೆ. ಇದರ ವಿರುದ್ಧ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ವಾಪಸ್ ಪಡೆದಿರುವುದರಲ್ಲಿ ತಪ್ಪು ಏನು ಇಲ್ಲ. ಅಂದು ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರು. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಈ ಪ್ರಕರಣವನ್ನು ಸಿಬಿಐಗೆ ಕೊಟ್ಟವರು ಅವರೇ. ಇಂದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಸಹಜವಾಗಿಯೇ ಡಿಕೆಶಿ ವಿರುದ್ಧದ ಪ್ರಕಕರಣವನ್ನು ವಾಪಸ್ ಪಡೆದಿದ್ದಾರೆ ಎಂದರು.

ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲಿಕ್ಕೆ ಕೇಂದ್ರ ಸರ್ಕಾರ ಉಪಯೋಗಿಸುತ್ತಿದೆ. ಸಂಸತ್ತಿನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವುದೇ ಪ್ರಕರಣ, ದೂರು ದಾಖಲು ಮಾಡದೇ ನೋಟಿಸ್ ಕೊಡುವುದು ತಪ್ಪು. ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೊಷಣೆ ಮಾಡಿದಾಗ ಟೀಕೆ ಮಾಡಿದ್ದರು. ಈಗ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಈ ರೀತಿಯಾಗಿ ಮಾಡುವುದು ಸರಿಯೇ? ಯಾವುದೇ ಗಂಭೀರ ಸ್ವರೂಪದ ದೂರು ಇಲ್ಲದಿದ್ದರೂ ದೆಹಲಿ ಡಿಸಿಎಂ ಸಿಸಿಡಿಯಾ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಯಾವುದೇ ಶಿಸ್ತು ಉಳಿದಿಲ್ಲ. ಇಲ್ಲಿಯ ಬಿಜೆಪಿ ನಾಯಕರು ದೆಹಲಿ ತನಕ ದೂರು ನೀಡಲು ಸಜ್ಜಾಗಿದ್ದಾರೆ. ನಾನು ಯತ್ನಾಳ, ಸೋಮಣ್ಣ ಹೇಳಿಕೆ ಗಮನಿಸಿದ್ದೇನೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು, ನಾಯಕರ ಸೇರ್ಪಡೆ ಮುಂದುವರಿಯಲಿದೆ. ಮಾಜಿ ಶಾಸಕ ಚಿಕ್ಕನಗೌಡ್ರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕಾದು ನೋಡಿ. ಯಾವಾಗ ಏನು ಆಗುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಹೊಸದಾಗಿ ಅಧ್ಯಕ್ಷರಾದ ಬಳಿಕ ಬಿ.ವೈ. ವಿಜಯೇಂದ್ರ ಅವರು ಏನೋ ಸರ್ಕಸ್ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net