

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯವನ್ನು ವಿರೋಧಿಸಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಾಗಿರುವ ಕೆಲವು ಗ್ರಾಪಂಗಳಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳನ್ನು ಹಿಂತೆಗೆಸಲು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ವಿವಿಧ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಯಿತು.
ವರದಿ ಅನ್ವಯವಾಗುವ ಪ್ರದೇಶದ ವ್ಯಾಪ್ತಿಗೆ ಒಳಪಡುವ 27 ಗ್ರಾಪಂಗಳಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಅವುಗಳಲ್ಲಿ 10 ಗ್ರಾಪಂಗಳಲ್ಲಿ ನಾಮಪತ್ರ ಸಲ್ಲಿಸದೆ ಉದ್ದೇಶ ಯಶಸ್ವಿಯಾಗಿದೆ. ಉಳಿದ 17 ಗ್ರಾಪಂಗಳಲ್ಲಿ ನಾಮಪತ್ರಗಳನ್ನು ಡಿ.14ರಂದು ಹಿಂತೆಗೆಸಬೇಕಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರು ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ವಾಪಸು ತೆಗೆಸಿದಲ್ಲಿ ಉಳಿದವರು ಪಕ್ಷೇತರರು ಹಿಂಪಡೆಯುತ್ತಾರೆಯೇ ಎನ್ನುವ ಸಂದೇಹ ವ್ಯಕ್ತಪಡಿಸಿದರು. ಉದ್ದೇಶಿತ ಪ್ರತಿ ಗ್ರಾಪಂ ವ್ಯಾಪ್ತಿಗೆ ಸಂಬಂಧಿಸಿದ ಪಕ್ಷಗಳ ಮುಖಂಡರ ಜತೆ ತೆರಳಿ ಎಲ್ಲ ಅಭ್ಯರ್ಥಿಗಳ ಮನವೊಲಿಸುವಂತೆ ಅಂತಿಮವಾಗಿ ತೀರ್ಮಾನಿಸಲಾಯಿತು.
ಮೊದಲ ಹೋರಾಟಕ್ಕೆ ಯಶಸ್ಸು
ಕರ್ನಾಟಕ ಬೆಳೆಗಾರರ ಒಕ್ಕೂಟ(ಕೆಜಿಎಫ್)ದ ಅಧ್ಯಕ್ಷ ಡಾ.ಮೋಹನ್ ಕುಮಾರ್ ಮಾತನಾಡಿ, ಎಲ್ಲ ರಾಜಕೀಯ ಮುಖಂಡರ ಸಹಕಾರದಿಂದಾಗಿ ಜಿಲ್ಲೆಯ 10 ಗ್ರಾಪಂಗಳು ಚುನಾವಣೆ ಬಹಿಷ್ಕರಿಸಿರುವುದರಿಂದ ಮೊದಲ ಹಂತದ ಹೋರಾಟಕ್ಕೆ ಯಶಸ್ಸು ದೊರಕಿದೆ. ಇನ್ನುಳಿದ ಗ್ರಾಪಂಗಳಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳನ್ನು ಹಿಂತೆಗೆಸುವುದು ರಾಜಕೀಯ ಪಕ್ಷಗಳಿಗೆ ದೊಡ್ಡ ವಿಚಾರವೇನಲ್ಲ. ಅದನ್ನು ಮಾಡಿದರೆ ಹೋರಾಟ ಫಲಪ್ರದವಾಗುತ್ತದೆ ಎಂದು ತಿಳಿಸಿದರು.
ನಾಮಪತ್ರ ವಾಪಸು ತೆಗೆಸುವ ಭರವಸೆ
ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಬಾಲಕೃಷ್ಣ ಬಾಳೂರು ಮಾತನಾಡಿ, ಮೂಡಿಗೆರೆ ತಾಲೂಕಿನಲ್ಲಿ ಚುನಾವಣೆ ಬಹಿಷ್ಕಾರ ಕೈಗೊಳ್ಳಲು ನಿರ್ಧರಿಸಿರುವ 18 ಗ್ರಾಪಂಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ಅವುಗಳನ್ನು ವಾಪಸು ತೆಗೆಸುವ ಭರವಸೆ ನೀಡುವುದಾಗಿ ತಿಳಿಸಿದರಲ್ಲದೆ ಇದಕ್ಕೆ ಸರ್ವ ಪಕ್ಷಗಳ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಗೊಂದಲಕ್ಕೆ ಅವಕಾಶ ಬೇಡ
ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನಿಸಿದ ಬಳಿಕ ನಾಮಪತ್ರ ಸಲ್ಲಿಸಿರುವುದರಿಂದ ಈ ಬಗ್ಗೆ ಮನವೊಲಿಸುವ ವಿಚಾರದಲ್ಲಿ ನಾವು ಎಡವಿದ್ದೇವೆ ಎನಿಸುತ್ತದೆ. ಆರಂಭದಲ್ಲೇ ನಮ್ಮ ಪ್ರಯತ್ನ ವಿಫಲವಾದಲ್ಲಿ ಹೋರಾಟ ಮುಂದುವರಿಸಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ನಾಮಪತ್ರ ವಾಪಸು ತೆಗೆಸಲು ನಮ್ಮ ಸಹಮತ ಇರುವುದಾಗಿ ಹೇಳಿದರು.
ವೈಫಲ್ಯವಾದೀತು
ಕೆಪಿಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ನಾಮಪತ್ರಗಳನ್ನು ಹಿಂತೆಗೆಸಲು ಆಗಲಿಲ್ಲ ಎಂದರೆ ಅದು ರಾಜಕೀಯ ಪಕ್ಷಗಳ ವೈಫಲ್ಯವಾಗುತ್ತದೆ. ಈ ವಿಚಾರದಲ್ಲಿ ಎಲ್ಲ ಪಕ್ಷದವರೂ ಒಟ್ಟಾಗಿ ಉಮೇದುವಾರಿಕೆ ಹಿಂತೆಗೆಸುವುದಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಚುನಾವಣೆ ಬಹಿಷ್ಕಾರ ವಿಚಾರವನ್ನು ರಾಜಕೀಯ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಹೋರಾಟದಲ್ಲಿ ಎಲ್ಲರೂ ಒಗ್ಗೂಡಬೇಕು. ಕೆಲವು ಗ್ರಾಪಂಗಳಲ್ಲಿ ನಮ್ಮ ಪಕ್ಷದವರೂ ಸೇರಿ ಇತರ ಪಕ್ಷದವರು ತಪ್ಪು ಮಾಡಿದ್ದಾರೆಂದು ಹೇಳಿದರು.
ಅನುಮಾನ ಅನಗತ್ಯ
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ನಾಮಪತ್ರ ವಾಪಸು ತೆಗೆಸುವ ವಿಚಾರದಲ್ಲಿ ನಾವು ತೆಗೆದು, ಅವರು ಬಿಟ್ಟರೆ ಎನ್ನುವ ಅನುಮಾನಗಳು ಬೇಡ. ಎಲ್ಲರೂ ಒಮ್ಮತದಿಂದ ಅಭ್ಯರ್ಥಿಗಳನ್ನು ಏಕಕಾಲದಲ್ಲಿ ಕಣದಿಂದ ಹಿಂದಕ್ಕೆ ಕರೆಸುವುದಾದಲ್ಲಿ ನಾವು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಅಭ್ಯರ್ಥಿಗಳ ಮನವೊಲಿಸಲು ಸಿದ್ಧ
ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಉಳಿದೆಲ್ಲ ಪಕ್ಷದವರು ತಮ್ಮ ಅಭ್ಯರ್ಥಿಗಳನ್ನು ಮನವೊಲಿಸಿ ಸ್ಪರ್ಧೆಯಿಂದ ಹೊರಗುಳಿಸಲು ಬದ್ಧರಾದಲ್ಲಿ ಮಾತ್ರ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ನಮ್ಮ ಪಕ್ಷದ ಬೆಂಬಲಿಗರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲು ಸಿದ್ಧರಿರುವುದಾಗಿ ಹೇಳಿದರು.
ಗಟ್ಟಿ ನಿಲುವು ಪ್ರದರ್ಶಿಸಬೇಕು
ಒಕ್ಕೂಟದ ಉಪಾಧ್ಯಕ್ಷ ಎ.ಕೆ.ವಸಂತೇಗೌಡ ಮಾತನಾಡಿ, ಎಲ್ಲ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ಹಿಂದಕ್ಕೆ ತೆಗೆಸಿದರೆ ಸಮಸ್ಯೆ ಇರುವುದಿಲ್ಲ. ಈ ವಿಚಾರದಲ್ಲಿ ಗಟ್ಟಿಯಾದ ನಿಲುವು ಪ್ರದರ್ಶಿಸಬೇಕು ಎಂದರು.
ಮುಖಂಡರಾದ ಕಾಂಗ್ರೆಸ್‍ನ ಎಂ.ಸಿ.ಶಿವಾನಂದಸ್ವಾಮಿ, ಬಿಎಸ್‍ಪಿಯ ಪರಮೇಶ್ವರ, ಬಿಜೆಪಿಯ ಎಚ್.ಡಿ.ತಮ್ಮಯ್ಯ, ಕೆ.ಆರ್.ಅನಿಲ್ ಕುಮಾರ್, ರಂಗನಾಥ್, ಜೆಡಿಎಸ್‍ನ ಹೊಲದಗದ್ದೆ ಗಿರೀಶ್, ಸಿಪಿಐನ ಜಿ.ರಘು, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಕಾಫಿ ಬೆಳೆಗಾರರಾದ ಕೆರೆಮಕ್ಕಿ ಮಹೇಶ್, ಸಂಪತ್ ಇತರರು ಸಭೆಯಲ್ಲಿದ್ದರು.