ಪಾಲಿಕೆ ಅಧಿಕಾರಾವಧಿ ಕೋರ್ಟ್ ಮೆಟ್ಟಿಲೇರಲು ನಿರ್ಧಾರ

4hsn 11
Published on

ಹಾಸನ: ಹಾಲಿ ಮಹಾನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ 2025ರ ಅಕ್ಟೋಬರ್ ವೇಳೆಗೆ ಮುಕ್ತಾಯವಾಗಲಿದ್ದು ಮುಂದಿನ ಒಂಬತ್ತು ತಿಂಗಳು ಅವಧಿ ವಿಸ್ತರಿಸುವಂತೆ ಸದಸ್ಯರು ನ್ಯಾಯಾಲಯ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಈ ಬಗ್ಗೆ ಚರ್ಚಿಸಿದ್ದು ಇನ್ನೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಹಾಸನ ಮಾತ್ರವಲ್ಲದೆ ಇತರ ಜಿಲ್ಲೆಯ ನಗರಸಭೆ, ಮಹಾನಗರ ಪಾಲಿಕೆಗಳು ಇದೇ ಹೆಜ್ಜೆ ಇರಿಸಿವೆ ಎನ್ನಲಾಗಿದೆ.

ಐದು ವರ್ಷ ಆಡಳಿತ ನಡೆಸಿಲ್ಲ: 2021ರ ಏಪ್ರಿಲ್‌ನಿಂದ 2025ಕ್ಕೆ ಐದು ವರ್ಷ ಪೂರ್ಣಗೊಂಡಿದ್ದು 2026ರ ವೇಳೆಗೆ ಚುನಾವಣೆ ನಡೆದು ಹೊಸ ಆಡಳಿತ ಜಾರಿಗೆ ಬರಲಿದೆ. ಆ ನಿಟ್ಟಿನಲ್ಲಿ ಸದಸ್ಯರು ಮಾನಸಿಕವಾಗಿ ಸಿದ್ಧತೆ ನಡೆಸಿದ್ದರಾದರೂ ಯಾದಗಿರಿ ನಗರಸಭೆಯು ಕಲಬುರಗಿ ಸಂಚಾರಿ ಪೀಠಕ್ಕೆ ಅರ್ಜಿ ಸಲ್ಲಿಸಿ ಹಾಲಿ ಜನಪ್ರತಿನಿಧಿಗಳೇ ಮತ್ತೆ 18 ತಿಂಗಳು ಅಧಿಕಾರ ಮುಂದುವರಿಸುವ ಅವಕಾಶ ಪಡೆದಿದ್ದರಿಂದ ಅದೇ ದಾರಿಯಲ್ಲಿ ಇಲ್ಲಿನ ಸದಸ್ಯರು ಸಹ ಮುಂದಡಿ ಇಟ್ಟಿದ್ದಾರೆ.

2021ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 17, ಬಿಜೆಪಿ 13, ಕಾಂಗ್ರೆಸ್‌ನ ಇಬ್ಬರು ಹಾಗೂ ಮೂವರು ಪಕ್ಷೇತರರು ಜಯ ಗಳಿಸಿದ್ದರು. ಸಂಖ್ಯಾಬಲ ಹೊಂದಿದ್ದರೂ ಮೀಸಲಾತಿ ಕೈಕೊಟ್ಟಿದ್ದರಿಂದ ಜೆಡಿಎಸ್ ಲೆಕ್ಕಾಚಾರ ತಲೆಕೆಳಗಾಗಿ ಬಿಜೆಪಿಯ ಆರ್.ಮೋಹನ್ ಅಧ್ಯಕ್ಷರಾಗಿ 2021ರ ಏಪ್ರಿಲ್ 23 ರಂದು ಅಧಿಕಾರ ಸ್ವೀಕರಿಸಿದ್ದರು. 30 ತಿಂಗಳ ಬಳಿಕ ಮೀಸಲಾತಿ ಬದಲಾವಣೆಯಾಗಿ ಬೇರೊಬ್ಬ ಅಧ್ಯಕ್ಷರ ನೇಮಕ ಮಾಡಬೇಕಿತ್ತಾದರೂ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಹಸನದಿಂದ ಮೀಸಲಾತಿ ಘೋಷಣೆಯಾಗಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯಾಗಿದ್ದ ಸಿ. ಸತ್ಯಭಾಮಾ ಅವರೇ 9 ತಿಂಗಳು ನಗರಸಭೆ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೀಸಲಾತಿ ಘೋಷಣೆಯಾಗದೆ ಆಡಳಿತ ನಡೆಸಲು ತಮಗೆ ಸಾಧ್ಯವಾಗದೆ ಇರುವುದರಿಂದ ಒಂಬತ್ತು ತಿಂಗಳ ಅವಧಿ ವಿಸ್ತರಿಸಬೇಕೆಂದು ಸದಸ್ಯರು ಮನವಿ ಮಾಡಿದ್ದಾರೆ.

ಕೋವಿಡ್‌ನಿಂದ ಕೆಲಸಗಳಾಗಿಲ್ಲ: ಒಂಬತ್ತು ತಿಂಗಳು ಆಡಳಿತಾಧಿಕಾರಿ ನೇಮಕ ಮಾತ್ರವಲ್ಲದೆ ಎರಡು ವರ್ಷ ಮಹಾಮಾರಿ ಕೋವಿಡ್ ಕಾರಣದಿಂದ ಅಭಿವೃದ್ಧಿ ಕೆಲಸ ಸಾಧ್ಯವಾಗಲಿಲ್ಲ. ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದರಿಂದ ಹಲವು ತಿಂಗಳು ಯಾವ ಚಟುವಟಿಕೆಯೂ ನಡೆಯಲಿಲ್ಲ. ಕಚೇರಿಗಳು ಬಂದ್ ಆಗಿದ್ದರಿಂದ ಜನಪ್ರತಿನಿಧಿಗಳು ನಿರುದ್ಯೋಗಿಗಳಾಗಿದ್ದರು. ಅದನ್ನು ನ್ಯಾಯಾಲಯದ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

ಚುನಾವಣೆ ಯಾರಿಗೂ ಇಷ್ಟವಿಲ್ಲ: ಮಹಾನಗರ ಪಾಲಿಕೆ ಚುನಾವಣೆ ಈಗಲೇ ನಡೆಯುವ ಬದಲು ಮುಂದೂಡಿದರೆ ಅನುಕೂಲ ಎಂಬುದು ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ. ನಗರಸಭೆಯಾಗಿದ್ದ ಹಾಸನ ಇತ್ತೀಚೆಗಷ್ಟೇ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಆದರೆ ಸರ್ಕಾರದಿಂದ ನಿರೀಕ್ಷಿತ ಅನುದಾನ ಬಿಡುಗಡೆಯಾಗಿಲ್ಲ. ನೂತನವಾಗಿ ಘೋಷಣೆಯಾದ ಪಾಲಿಕೆಗೆ 200 ಕೋಟಿ ರೂ. ಅನುದಾನ ನೀಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ಹೇಳಿತ್ತಾದರೂ ನಂತರ ಹಣ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳಿಂದ ಹೆಚ್ಚುವರಿ ಅನುದಾನ ಲಭ್ಯವಾಗಿಲ್ಲ. ಸ್ಥಳೀಯ ಸಂಪನ್ಮೂಲ ನೆಚ್ಚಿಕೊಂಡು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ವಾರ್ಡ್‌ಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ. ಹೀಗಾಗಿ ತಕ್ಷಣ ಚುನಾವಣೆ ಘೋಷಿಸಿದರೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂಬ ಭಾವನೆಯಿದೆ. 2026ರ ಏಪ್ರಿಲ್‌ವರೆಗೆ ಇದೇ ಆಡಳಿತ ಮುಂದುವರಿಸಬೇಕೆಂಬ ಇರಾದೆ ಕೆಲವರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net