ದೃಢೀಕರಣದೊಂದಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ

26 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ವಿಷಯವಾಗಿ ನ. 29ರ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ದೃಢೀಕರಣದೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸದಸ್ಯರು ಧಾರವಾಡದಲ್ಲಿನ ಆಯುಕ್ತರ ಕಚೇರಿ ಎದುರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದ ಸಮಯದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತ್ಯೇಕ ಪಾಲಿಕೆಗೆ ಶಾಸಕರು, ಪಾಲಿಕೆ ಸದಸ್ಯರು ಸೇರಿ ಎಲ್ಲರೂ ಸಮ್ಮತಿಸಿದ್ದಾರೆ. ಸಾಮಾನ್ಯ ಸಭೆಯಲ್ಲೂ ಚಚಿರ್ಸಲಾಗಿದೆ. ಕಳೆದ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಪಾಲಿಕೆ ಆಯುಕ್ತರು ಪ್ರಸ್ತಾವನೆ ಸಲ್ಲಿಸಲು ವಿಳಂಬ ಮಾಡುತ್ತಿದ್ದಾರೆ. ನ. 8ರಂದೇ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದರೂ ಕಳುಹಿಸಿಲ್ಲ. ಹೀಗಾಗಿ ಪ್ರಸ್ತಾವನೆ ಕಳುಹಿಸುವವರೆಗೂ ಹೋರಾಟ ನಡೆಸುವುದಾಗಿ ಹೋರಾಟಗಾರರು ಪಟ್ಟು ಹಿಡಿದಿದ್ದರು.

ನಂತರ ಹೋರಾಟಗಾರರು ಹಾಗೂ ಪಾಲಿಕೆ ಸದಸ್ಯರೊಂದಿಗೆ ಚಚಿರ್ಸಿದ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಸಾಮಾನ್ಯ ಸಭೆಯಲ್ಲಿ ಎಲ್ಲರ ಅನುಮತಿ ಪಡೆದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಹೋರಾಟಗಾರರು, ಈಗಾಗಲೇ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ, ಮತ್ತೊಮ್ಮೆ ಏಕೆ ಚರ್ಚೆ? ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದರು.

ಈ ವಿಷಯವಾಗಿ ಮೇಯರ್​ ರಾಮಣ್ಣ ಬಡಿಗೇರ ಜತೆಗೆ ಸ್ಥಳದಲ್ಲೇ ದೂರವಾಣಿಯಲ್ಲಿ ಮಾತನಾಡಿದ ಆಯುಕ್ತರು, ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಪ್ರಸ್ತಾವ ಸಲ್ಲಿಸಿದರೆ ಆಗುವ ಅನುಕೂಲಗಳ ಕುರಿತು ಮನವರಿಕೆ ಮಾಡಿದರು. ಇದಕ್ಕೆ ಮೇಯರ್​ ಸಹ ಸಮ್ಮಿತಿಸಿದರು.

ಕೊನೆಗೆ ಮೇಯರ್​ ಸಹ ಹೋರಾಟಗಾರರ ಜತೆಗೆ ಮಾತನಾಡಿ, ಆಯುಕ್ತರಿಗೂ ಪ್ರತ್ಯೇಕ ಪಾಲಿಕೆಗೆ ಆಸಕ್ತಿ ಇದೆ. ತರಾತುರಿಯಲ್ಲಿ ಕಳುಹಿಸಿದ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿದರೆ ಕಷ್ಟ. ಕಾನೂನು ಬದ್ಧವಾಗಿ ಕಳುಹಿಸುವುದು ಸೂಕ್ತ ಎಂಬ ಆಶಯ ಇದೆ. ಹೀಗಾಗಿ ಸಮಾನ್ಯ ಸಭೆಯಲ್ಲಿ ವಿಶೇಷ ವಿಷಯ ಎಂದು ಪರಿಗಣಿಸಿ ಎಲ್ಲರ ಸಮ್ಮತಿ ಹಾಗೂ ದೃಢೀಕರಣದೊಂದಿಗೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸದಸ್ಯರಾದ ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ದಾನಪ್ಪ ಕಬ್ಬೇರ, ಜಿ.ಎಸ್​. ಬ್ಯಾಡಗಿ, ಎಂ.ಬಿ. ಕಟ್ಟಿ, ಚನ್ನಬಸವಪ್ಪ ಕರಡೆಣ್ಣನವರ, ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಆನಂದ ಯಾವಗಲ್​, ಮಂಜುನಾಥ ಬಟ್ಟೆಣ್ಣವರ, ವಿಷ್ಣುತಿರ್ಥ ಕೊರ್ಲಹಳ್ಳಿ, ಸುರೇಶ ಬೇದರೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net