

ಮೈಸೂರು: ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ(ಜಾತಿ ಜನಗಣತಿ) ವರದಿ ಜಾರಿ ಕುರಿತು ಹೋರಾಟ ನಡೆಸುವ ಸಲುವಾಗಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಪೂರ್ವಭಾವಿ ಸಭೆಯನ್ನು ಭಾನುವಾರ ಸಭೆ ನಡೆಸಲಾಯಿತು.
ಸಿದ್ಧಾರ್ಥನಗರದ ಕನಕ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಜಾತಿ ಜನಗಣತಿ ಸಮೀಕ್ಷೆಯ ವರದಿಯನ್ನು ಕೂಡಲೇ ಸರ್ಕಾರ ಜಾರಿ ಮಾಡಬೇಕು. ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.16ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಮೈಸೂರಿನಿಂದ ಸುಮಾರು 5 ಸಾವಿರ ಜನ ತೆರಳಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ತಿಳಿಸಿದರು.
ವರದಿ ಜಾರಿ ಮಾಡುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಆದ್ದರಿಂದ ಈ ವಿಚಾರಕ್ಕೆ ಪಕ್ಷತೀತವಾಗಿ ಇದಕ್ಕೆ ಬೆಂಬಲ ನೀಡಬೇಕು. ಅ.18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಈ ಕುರಿತು ಒತ್ತಡ ಹೇರಲು ಹೋರಾಟ ಕೈಗೊಳ್ಳಲಾಗಿದೆ ಎಂದರು.
ಮುಖಂಡರಾದ ರಾಮಚಂದ್ರಪ್ಪ, ಅನಂತನಾಯಕ, ನಾಗರಾಜ್, ರಾಮಸ್ವಾಮಿ, ರಾಮೇಗೌಡ, ಪುಟ್ಟಸಿದ್ದೆಗೌಡ, ಆನಂದ್, ಕೆಂಪಣ್ಣ ಸೇರಿದಂತೆ ಹಲವರು ಇದ್ದರು.