ಒಕ್ಕಲಿಗ ಸಮುದಾಯ ಬಲಗೊಳಿಸಲು ತೀರ್ಮಾನ

19
Published on

ಮೈಸೂರು: ನಗರ ಹಾಗೂ ತಾಲೂಕು ಮಟ್ಟದಲ್ಲಿ ಒಕ್ಕಲಿಗ ಸಮುದಾಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲ ಸಂಘ-ಸಂಸ್ಥೆಗಳು ಒಕ್ಕಲಿಗ ಸಂಘಟನೆಗಳ ಸಾಮರಸ್ಯ ವೇದಿಕೆಯಡಿ ಕೆಲಸ ನಿರ್ವಹಿಸುವಂತೆ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು.

ಜಯನಗರದ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಮೈಸೂರು ಜಿಲ್ಲಾ ಮತ್ತು ನಗರದ ಒಕ್ಕಲಿಗ ಸಂಘಟನೆಗಳ ಸಭೆಯಲ್ಲಿ ಸಾಮರಸ್ಯ ವೇದಿಕೆ ಅಡಿಯಲ್ಲಿ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾತಿಗಣತಿ ನಡೆಯುತ್ತಿರುವ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವುದು. ಸಮುದಾಯಕ್ಕೆ ಅನ್ಯಾಯವಾದಾಗ ಅಲ್ಲಿ ಸಮುದಾಯದವರೆಲ್ಲರೂ ಸಂಘಟನಾತ್ಮಕವಾಗಿ ಹೋರಾಟ ನಡೆಸುವ ಕುರಿತು ತೀರ್ಮಾನಿಸಲಾಯಿತು.

ಜನಗಣತಿಯ ಬಗ್ಗೆ ಇತರೆ ಸಮುದಾಯಗಳ ಮಠಾಧೀಶರು ಹಾಗೂ ರಾಜಕಾರಣಿಗಳು ಪ್ರಚಾರದೊಂದಿಗೆ ಸಮುದಾಯವನ್ನು ಜಾಗೃತಗೊಳಿಸುತ್ತಿರುವ ಮಾದರಿಯಲ್ಲಿ ನಮ್ಮ ಸಮುದಾಯದ ಮಠಾಧೀಶರು, ರಾಜಕಾರಣಿಗಳು ಮಾತನಾಡದಿರುವುದು ಬೇಸರದ ಸಂಗತಿಯಾಗಿದೆ. ಈ ಕೂಡಲೇ ಸಮುದಾಯದ ಸ್ವಾಮೀಜಿಗಳು ಹಾಗೂ ನಾಯಕರು ಜನಗಣತಿ ಕುರಿತಂತೆ ಮಾತನಾಡಬೇಕೆಂದು ಆಗ್ರಹಿಸಿದರು.

ಜತೆಗೆ ಸಮುದಾಯದ ಸಂಘಟನೆ ಬಲಗೊಳಿಸಲು ಸದರಿ ಸಾಮರಸ್ಯ ವೇದಿಕೆಯಡಿಯಲ್ಲಿ ಪ್ರತಿ ಸಂಘದಿಂದ ಇಬ್ಬರೂ ಪ್ರತಿನಿಧಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ಸರ್ಕಾರದ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪಿಸಲು ಹಾಗೂ ಸಮುದಾಯಕ್ಕೆ ಎನಾದರೂ ಅನ್ಯಾಯವಾದ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ನ್ಯಾಯಯುತ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ಜಿಪಂ ಮಾಜಿ ಅಧ್ಯಕ್ಷ ಮಾದೇಗೌಡ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್‌ಗೌಡ, ನೇಗಿಲಯೋಗಿ ಟ್ರಸ್ಟ್‌ನ ರವಿಕುಮಾರ್, ನಮ್ಮೂರು ನಮ್ಮೋರು ಟ್ರಸ್ಟ್ ಅಧ್ಯಕ್ಷ ಸತೀಶ್ ಗೌಡ, ನಗರಪಾಲಿಕೆ ಮಾಜಿ ಸದಸ್ಯೆ ಪ್ರೇಮಾಶಂಕರೇಗೌಡ, ಜಿಪಂ ಮಾಜಿ ಸದಸ್ಯ ಅರುಣ್ ಕುಮಾರ್, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮಹಿಳಾ ಸಂಘಟನೆಯ ಸುಶೀಲಾ ನಂಜಪ್ಪ, ಪೂರ್ವ ಒಕ್ಕಲಿಗರ ಸಂಘ, ವಿವಿಧ ಒಕ್ಕಲಿಗ ಮಹಿಳಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಪೊಲೀಸ್ ಕಮೀಷನರ್ ಭೇಟಿಗೆ ನಿರ್ಧಾರ:

ಆಲನಹಳ್ಳಿಯಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಿಪಂ ಮಾಜಿ ಸದಸ್ಯ ಮಾದೇಗೌಡರ ನೇತೃತ್ವದ ತಂಡದ ವಿರುದ್ಧ ಪೊಲೀಸರು ದೂರು ದಾಖಲಿಸಿ ಕಾರಣ ಕೇಳಿ ನೋಟಿಸ್ ನೀಡಿರುವ ಕ್ರಮವನ್ನು ಸಭೆಯಲ್ಲಿ ಖಂಡಿಸಲಾಯಿತು.

ಇದೇ ವಿಚಾರವಾಗಿ ನಗರ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಈಗ ಹಾಕಿರುವ ಸುಳ್ಳು ಮೊಕ್ಕದ್ದಮೆ ವಾಪಸ್ ಪಡೆಯಬೇಕು, ಸಿಸಿಟಿವಿ ವಾಸ್ತವನ್ನು ಆಧರಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net