ಮೈಸೂರಿನ ಪಾರಂಪರಿಕ ಕಟ್ಟಡಗಳ ಉಳಿವಿಗೆ ಸಿಎಂ ಬಳಿ ನಿಯೋಗ ತೆರಳಲು ನಿರ್ಧಾರ

mcc
Published on

ಮೈಸೂರು: ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯಕ್ಕೆ ಅಗತ್ಯ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು, ಸರ್ಕಾರ, ನಗರ ಪಾಲಿಕೆ ಮತ್ತು ಖಾಸಗಿ ಸಹಭಾಗಿತ್ವ ಎಂಬ ಮೂರು ವಿಧದಲ್ಲಿ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ನಗರ ಪಾಲಿಕೆ ನಿರ್ಧರಿಸಿದೆ.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ವಿಚಾರವಾಗಿ ನಗರ ಪಾಲಿಕೆ ವತಿಯಿಂದ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ತಜ್ಞರ ಅಭಿಪ್ರಾಯವನ್ನು ಪಡೆದು ಈ ನಿರ್ಧಾರ ಕೈಗೊಳ್ಳಲಾಯಿ ತು.
ಸಿಎಂ ಬಳಿ ನಿಯೋಗ: ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕೋಟ್ಯಾಂತರ ರೂ. ಅನುದಾನದ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರದಿಂದ ದೊಡ್ಡ ಮೊತ್ತವ ನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಕಟ್ಟಡಗಳ ಸಂರಕ್ಷಣೆಗೆ ತುರ್ತಾಗಿ ಒಂದಷ್ಟು ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಬಳಿ ಕೋರಲಾಗು ವುದು. ಅದಾದ ನಂತರ ಪ್ರತಿ ಬಾರಿಯ ಬಜೆಟ್‌ನಲ್ಲಿ ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅನುದಾನ ಘೋಷಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ಹೇಳಿದರು.
ಪಾಲಿಕೆಯಿಂದ ಸಂರಕ್ಷಣೆ: ನಗರ ಪಾಲಿಕೆ ಕಚೇರಿ, ದೊಡ್ಡ ಗಡಿಯಾರ ಹಾಗೂ ಪುರಭವನ ಕಟ್ಟಡಗಳು ದುಸ್ಥಿತಿಯಲ್ಲಿ ಇವೆ. ಈ ಕಟ್ಟಡಗಳ ಸಂರಕ್ಷಣೆಗೂ ಅನುದಾನ ಕೋರಲಾಗುವುದು. ಒಂದುವೇಳೆ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾದರೆ ನಗರ ಪಾಲಿಕೆಯ ಅನುದಾನ ದಲ್ಲಿಯೇ ಈ ಮೂರು ಕಟ್ಟಡಗಳ ಸಂರಕ್ಷಣಾ ಕಾರ್ಯ ಕೈಗೊಳ್ಳಲಾಗುವುದು. ಪುರಭವನದ ಒಂದು ಭಾಗ ಕುಸಿದು ಬೀಳುವ ಆತಂಕ ದಲ್ಲಿದ್ದು, ತುರ್ತಾಗಿ ಸಂರಕ್ಷಣಾ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಎಸ್‌ಆರ್ ನಿಧಿ ಬಳಕೆ: ನಗರದಲ್ಲಿ ಸಾಕಷ್ಟು ಖಾಸಗಿ ಕಂಪನಿಗಳು ಇದ್ದು, ಅವುಗಳ ಸಿಎಸ್‌ಆರ್ ನಿಧಿಯನ್ನು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬಳಕೆ ಮಾಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ವಿವಿಧ ಕಂಪನಿಗಳಿಗೆ ಕಟ್ಟಡಗಳ ಸಂರಕ್ಷಣೆ ಹಾಗೂ ನಿರ್ವಹಣೆ ಜವಾಬ್ದಾರಿ ವಹಿಸಲಾಗುವುದು. ಅಲ್ಲದೆ ಖಾಸಗಿ ಸಂಘ ಸಂಸ್ಥೆಗಳು ಮುಂದೆ ಬಂದರೆ ಅವರಿಗೂ ಸಂರಕ್ಷಣೆಯ ಜವಾಬ್ದಾರಿ ವಹಿಸಲಾಗುವುದು. ನಮ್ಮ ಮೈಸೂರು ಫೌಂಡೇಷನ್‌ಗೆ ನಗರದ ಕೆ.ಆರ್. ವೃತ್ತ, ಚಾಮರಾಜ ವೃತ್ತ ಹಾಗೂ ಆಯುರ್ವೇದ ವೃತ್ತದ ಂರಕ್ಷಣಾ ಜವಾಬ್ದಾರಿಯನ್ನು ವಹಿಸಲಾಗುವುದು ಎಂದರು.
ಸಭೆಯಲ್ಲಿ ಉಪ ಮೇಯರ್ ರೂಪಾ, ಪಾರಂಪರಿಕ ತಜ್ಞ ಪ್ರೊ. ಎನ್.ಎಸ್. ರಂಗರಾಜು, ನಮ್ಮ ಮೈಸೂರು ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಭಗೀರಥ್, ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಮಹೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net