ವಸತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ನಿರ್ಧಾರ

nrp shelter
ಎನ್.ಆರ್.ಪುರ ಪಪಂನಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ನಗರ ಆಶ್ರಯ ಸಮಿತಿ ಸಭೆ ನಡೆಯಿತು. ತನುಜಾ ಟಿ.ಸವದತ್ತಿ, ಆರ್.ವಿ.ಮಂಜುನಾಥ್ ಇದ್ದರು.
Published on

ಎನ್.ಆರ್.ಪುರ: ಆಶ್ರಯ ಸಮಿತಿಯಲ್ಲಿ ಈ ಹಿಂದೆ ಆಯ್ಕೆಯಾದ 158 ಲಾನುಭವಿಗಳ ಪಟ್ಟಿ ಪರಿಷ್ಕರಿಸಿ ಅಂತಿಮ ಪಟ್ಟಿ ತಯಾರಿಸಲು ನಗರ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು. ಈ ಹಿಂದೆ ಆಶ್ರಯ ಸಮಿತಿಯಲ್ಲಿ ಆಯ್ಕೆಯಾದ ಲಾನುಭವಿಗಳಲ್ಲಿ ಒಬ್ಬರು ಮರಣ ಹೊಂದಿದ್ದಾರೆ. ಇಬ್ಬರು ಲಾನುಭವಿಗಳ ಬಗ್ಗೆ ಅಧಿಕೃತ ದಾಖಲೆಗಳ ಮೂಲಕ ಆಕ್ಷೇಪಣೆ ಬಂದಿದೆ ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ಈ ಮೂರೂ ಲಾನುಭವಿಗಳ ಹೆಸರನ್ನು ಕೈಬಿಟ್ಟು ಹೆಚ್ಚುವರಿ ಪಟ್ಟಿಯಲ್ಲಿರುವ ಲಾನುಭವಿಗಳ ಹೆಸರನ್ನು ಜ್ಯೇಷ್ಠತೆ ಆಧಾರದಲ್ಲಿ ಸೇರಿಸಲು ಅಧಿಕಾರಿಗಳಿಗೆ ಶಾಸಕ ಸೂಚಿಸಿದರು.2021-22ನೇ ಸಾಲಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ ವಸತಿ ಯೋಜನೆಯಡಿ 12 ಲಾನುಭವಿಗಳು ಆಯ್ಕೆಯಾಗಿದ್ದರು. ಇದರಲ್ಲಿ ಏಳು ಲಾನುಭವಿಗಳು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಇಬ್ಬರು ಅತಿವೃಷ್ಟಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಮೂವರು ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಲಿಖಿತ ಪತ್ರ ನೀಡಿದ್ದಾರೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.ಬೇರೆ ಯಾರಾದರೂ ಮೂರು ಮಂದಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದೆ ಬರುವುದಾದರೆ 1 ತಿಂಗಳು ಅವರಿಗೆ ಅವಕಾಶ ನೀಡಿ. ಇಲ್ಲವಾದಲ್ಲಿ ಅನುದಾನವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಕ್ರಮಕೈಗೊಳ್ಳುವಂತೆ ಶಾಸಕ ಸೂಚಿಸಿದರು.ಪಟ್ಟಣದ ವಾರ್ಡ್ ನಂ 1 ಸರ್ವೇ ನಂ 200ರ ಪಪಂ ಜಾಗದಲ್ಲಿ ಹಲವು ವರ್ಷಗಳಿಂದ 58 ಮನೆ ನಿರ್ಮಿಸಿಕೊಂಡಿರುವ ವಿಚಾರ ಚರ್ಚೆಯಾಯಿತು. ಪಪಂನಿಂದ ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಇವರಿಗೆ ಮಾರುಕಟ್ಟೆ ಬೆಲೆ ಪಡೆದು ಅಥವಾ ಹರಾಜಿನ ಮೂಲಕ ಮನೆ ಹಕ್ಕುಪತ್ರ ನೀಡಲು ಸಾಧ್ಯವೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿಯಿಂದ ಸಲಹೆ ಪಡೆಯಲು ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. ವಾರ್ಡ್ ನಂ 7ರ ರಾಜೀವ್ ನಗರದಲ್ಲಿ ಈ ಹಿಂದೆ ಹಂಚಿಕೆಯಾಗದ ಹಕ್ಕುಪತ್ರಗಳು ಮೂಲ ಮಂಜೂರಾತಿದಾರರು ಲಭ್ಯವಿಲ್ಲದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಹಾಗೂ ನಿಯಮದಂತೆ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗ್ರಾಮಠಾಣಾ ಹಾಗೂ ಸರ್ಕಾರಿ ಜಾಗದಲ್ಲಿ 80 ರಿಂದ 100 ವರ್ಷಗಳಿಂದ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ವಿತರಣೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಸಭೆ ಸಮ್ಮತಿಸಿತು. ಪಟ್ಟಣದಲ್ಲಿ 400ಕ್ಕೂ ಹೆಚ್ಚು ಆಶ್ರಯ ನಿವೇಶನದ ಲಾನುಭವಿಗಳು ಇದ್ದು ಇವರಿಗೆ ನಿವೇಶನ ಹಂಚಿಕೆಗಾಗಿ ಡಿಪೋದಲ್ಲಿ 10 ಎಕರೆ ಜಾಗ ಮಂಜೂರು ಮಾಡುವಂತೆ ಡಿಸಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.ಪಪಂ ಆಡಳಿತಾಧಿಕಾರಿ ತನುಜಾ ಟಿ. ಸವದತ್ತಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಪಪಂನ ಲಕ್ಷ್ಮಣ್ ಗೌಡ, ಚಂದ್ರಕಾಂತ್, ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net