

ಮೈಸೂರು: ಅರಣ್ಯ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವ ಭೂಮಿಯನ್ನು ವಾಪಸ್ ಪಡೆಯಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬ್ರಿಟಿಷರ ಅವಧಿಯಲ್ಲಿ ಸ್ವಾತಂತ್ರ್ಯಪೂರ್ವ ಹಾಗೂ ನಂತರವೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ದೊಡ್ಡ, ದೊಡ್ಡ ಕಂಪನಿಗಳು ಸೇರಿದಂತೆ ಅನೇಕರು ಇಂದಿಗೂ ಅಕ್ರಮವಾಗಿ ದೊಡ್ಡ ಎಸ್ಟೇಟ್‌ಗಳಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಕೆಲವರು 90 ವರ್ಷ ಗುತ್ತಿಗೆ ಪಡೆದು ಅದನ್ನು ಮರು ವಿಸ್ತರಣೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲೇ 7500 ಎಕರೆವರೆಗೂ ಭೂಮಿ ಅನ್ಯರ ಸುಪರ್ದಿಯಲ್ಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬ್ರಿಟಿಷರ ಕಾಲದಲ್ಲಿ ಅರಣ್ಯ ಭೂಮಿಯಲ್ಲಿ ಕಾಫಿ, ರಬ್ಬರ್ ಬೆಳೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಗುತ್ತಿಗೆ ಅವಧಿ ಮುಗಿದರೂ ವಾಪಸ್ ಮಾಡದ ಕುರಿತು ಚಾಮರಾಜನಗರ ಸಿಸಿಎಫ್ ಆಗಿದ್ದ ಬಿ.ಪಿ.ರವಿ ಅವರು ಪ್ರಕರಣವನ್ನು ಬೆಳಕಿಗೆ ತಂದರು. ಭೂಮಿ ವಾಪಸ್ ನೀಡುವಂತೆ ದೊಡ್ಡ ಕಂಪನಿಗಳಿಗೂ ನೋಟಿಸ್ ನೀಡಿದ್ದರು. ಗುತ್ತಿಗೆ ಅವಧಿ ಮುಗಿದರೂ ಹಾಗೂ ಕೋಟ್ಯಂತರ ರೂ. ಗುತ್ತಿಗೆ ಹಣ ಪಾವತಿ ಮಾಡದವರು ಸಹ ಇಂದಿಗೂ ಅರಣ್ಯ ಭೂಮಿಯಲ್ಲಿದ್ದಾರೆ. ಇದನ್ನು ಗಮನಿಸಿ ಇಬ್ಬರು ಹಿರಿಯ ವಕೀಲರ ನೇತೃತ್ವದ ಅರಣ್ಯಾಧಿಕಾರಿಗಳ ತಂಡವನ್ನು ನೇಮಿಸಿ ಅರಣ್ಯ ಭೂಮಿ ವಾಪಸ್ ಪಡೆಯಲು ಸೂಕ್ತ ನ್ಯಾಯವಾದ ಮಂಡನೆಗೆ ತಾಕೀತು ಮಾಡಿರುವುದಾಗಿ ಹೇಳಿದರು.
ತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸುವಂತೆ ನ್ಯಾಯಾಲಯವನ್ನು ಕೋರುವ ಮೂಲಕ ಇನ್ನಾರು ತಿಂಗಳಲ್ಲಿ ಅರಣ್ಯ ಭೂಮಿ ವಾಪಸ್ ಪಡೆಯಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.