

ಬೆಂಗಳೂರು: ಮಂಡ್ಯ ಜಿಲ್ಲೆಯ ಶಾಸಕರ ಒತ್ತಾಯದ ಮೇರೆಗೆ ಜುಲೈ 8 ರಿಂದ ಹದಿನೈದು ದಿನಗಳ ಕಾಲ ವಿ.ಸಿ.ನಾಲೆಗೆ ನೀರು ಹರಿಸಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸಾಮಾನ್ಯವಾಗಿ ಪ್ರತಿವರ್ಷ ಕೆ.ಆರ್.ಎಸ್ ಅಣೆಕಟ್ಟಿನಿಂದ ಜುಲೈ ಎರಡನೇ ವಾರದಿಂದ ವಿ.ಸಿ.ನಾಲೆಗೆ ನೀರು ಹರಿಸಲಾಗುತ್ತಿತ್ತು.. ಆದರೆ ಈ ಬಾರಿ ಮಾರ್ಚ್‌ನಲ್ಲಿ ನಾಲೆಗೆ ನೀರು ಹರಿಸದ ಹಿನ್ನಲೆಯಲ್ಲಿ ಜು.8 ರ ಸಂಜೆಯಿಂದ ನೀರು ಹರಿಸಲಾಗುವುದು ಎಂದು ಹೇಳಿದರು.
ಕೇವಲ ಕೆರೆ ಕಟ್ಟೆ ತುಂಬಿಸಲು ಹಾಗು ಜಾನುವಾರುಗಳ ಹಿತದೃಷ್ಟಿಯಿಂದ ನಾಲೆಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮುಂದಿನ 15 ದಿನಗಳ ನಂತರ ಮುಂಗಾರು ಮಳೆಯ ಪರಿಸ್ಥಿತಿ ಹಾಗೂ ಕೆಆರ್‌ಎಸ್ ಅಣೆಕಟ್ಟಿನ ಒಳಹರಿವು ಗಮನಿಸಿಕೊಂಡು ರೈತರ ಬೆಳೆಗಳಿಗೂ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ವಿ.ಸಿ.ನಾಲೆಯ 36 ಕಿಮೀ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದ್ದು, ಬಾಕಿ 16 ಕಿಮೀ ಕಾಮಗಾರಿ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಿದ ನಂತರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಟ್ರಯಲ್ ಬ್ಲಾಸ್ಟ್ ಬಗ್ಗೆ ಸಿ.ಎಂ. ಸಿದ್ದರಾಮಯ್ಯ ಹಾಗೂ ಹೈಕೋರ್ಟ್‌ಅಡ್ವೋಕೆಟ್ ಜನರಲ್ ಜೊತೆ ಚರ್ಚೆ ಮಾಡಿ ಜುಲೈ 15 ರೊಳಗೆ ತೀರ್ಮಾನ ಕೈಗೊಳ್ಳಲಾಗುವುದು. ಮಂಡ್ಯದಲ್ಲಿ ಟ್ರಯಲ್ ಬ್ಲಾಸ್ಟ್ ಸಾಧಕ-ಬಾಧಕ ಬಗ್ಗೆ ರೈತರ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಿದರು.
ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮಂಜೇಗೌಡ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸದ್ಯಕ್ಕೆ ಜನ, ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗೆ ನೀರು ಹರಿಸಲಾಗುತ್ತದೆ. 15 ದಿನ ಕಾಲ ಪ್ರತಿ ನಿತ್ಯ 3000 ಕ್ಯೂಸೆಕ್ ನೀರು ಹರಿಸಲಾಗುವುದು. ಈಗಿರುವ ಬೆಳೆಗೆ ನೀರು ಹರಿಸಲು ಅಡ್ಡಿ ಇಲ್ಲ. ನಿರೀಕ್ಷೆಗೆ ತಕ್ಕಷ್ಟು ಮಳೆಯಾಗಿಲ್ಲ. ಹಾಗಾಗಿ ಜುಲೈ ಅಂತ್ಯಕ್ಕೆ ಮಳೆಯ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.