ಬೆಳೆಗಳಿಗೆ ನೀರು ಬಿಡಲು ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ

Screenshot_2025-07-18-19-56-39-64.jpg
Published on

ಬೆಳಗಾವಿ: ಮಲಪ್ರಭಾ ಜಲಾಶಯದಲ್ಲಿ ಸದ್ಯ 25 ಟಿಎಂಸಿ ನೀರು ಸಂಗ್ರಹವಿದ್ದು, ಜನ ಜಾನುವಾರುಗಳಿಗೆ ಮುಂದಿನ ಜುಲೈವರೆಗೂ ಕುಡಿಯಲು 20 ಟಿಎಂಸಿ ನೀರು ಮೀಸಲಿರಿಸಿ, ಉಳಿದಂತಹ 4.5 ಟಿಎಂಸಿ ನೀರನ್ನು ಬೆಳೆದ ಬೆಳೆಗಳಿಗೆ ಅನುಕೂಲವಾಗುವಂತೆ ಜುಲೈ 18 ರಿಂದ 17 ದಿನಗಳವರೆಗೆ ಮಲಪ್ರಭಾ ಅಚ್ಚುಕಟ್ಟುಪ್ರದೇಶದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿ ಉತ್ತರ ವಲಯದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಶುಕ್ರವಾರ ನಡೆದ ನೀರು ನಿರ್ವಹಣಾ ಸಲಹಾ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸದ್ಯ ನೀರು ಬಿಡುಗಡೆ ಮಾಡುವುದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ರೈತರು ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು. ಬರುವ ದಿನಗಳಲ್ಲಿ ಇನ್ನಷ್ಟು ಮಳೆಯಾದಲ್ಲಿ ನೀರಿನ ಅಭಾವ ಸೃಷ್ಟಿ ಆಗುವುದಿಲ್ಲ. ಅಲ್ಲಿಯವರೆಗೂ ರೈತರು ನೀರು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಮಲಪ್ರಭಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಪ್ರಸಕ್ತ ಸಾಲಿನ ಹಂಗಾಮಿಗೆ ಕಾಲುವೆಗಳಿಗೆ ನೀರು ಬಿಡುವ ಕುರಿತು ಮಲಪ್ರಭಾ ಯೋಜನೆಯಡಿ ಬರುವಂತಹ ಕ್ಷೇತ್ರಗಳ ಶಾಸಕರ, ರೈತರ ಬೇಡಿಕೆಗೆ ಸ್ಪಂದಿಸಿ ಸಭೆ ಕರೆದು ಕಾಲುವೆಗಳಿಗೆ ನೀರು ಬಿಡುಗಡೆಗೆ ಆದೇಶ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸುದ್ದಿಗಾರಿಗೆ ಮಾಹಿತಿ ನೀಡಿದರು.

ಇದಕ್ಕೂ ಮುಂಚೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು.

ನರಗುಂದ ಶಾಸಕರಾದ ಸಿ.ಸಿ.ಪಾಟೀಲ, ಬಾದಾಮಿ ಶಾಸಕರಾದ ಚಿಮ್ಮನಕಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net