

ಮಂಡ್ಯ: ಮೈಷುಗರ್ ಹೊಸ ಕಾರ್ಖಾನೆಯನ್ನು ಸ್ಥಾಪಿಸಬೇಕೆ?. ಅಥವಾ ಹಾಲಿ ಇರುವುದನ್ನೇ ಅಭಿವೃದ್ಧಿಪಡಿಸಬೇಕೆ?. ಅದರಿಂದಾಗುವ ಸಾಧಕ-ಬಾಧಕಗಳೇನು ಎಂಬುದರ ಬಗ್ಗೆ ತಾಂತ್ರಿಕ ಸಮಿತಿಯಿಂದ ವರದಿ ಪಡೆಯಲಾಗಿದೆ. ಅದರ ಆಧಾರದ ಮೇಲೆ ಕಬ್ಬು ಅರೆಯುವಿಕೆ ಸಾಮರ್ಥ್ಯ ಹೆಚ್ಚಳದೊಂದಿಗೆ ಹಾಲಿ ಇರುವ ಕಾರ್ಖಾನೆಯನ್ನೇ ಸಮಗ್ರವಾಗಿ ಪುನಃಶ್ಚೇತನಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಾರ್ಖಾನೆಗೆ ಸಂಬಂಧಿಸಿದಂತೆ ಕೆಆರ್‌ಎಸ್‌ನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಷುಗರ್‌ನ ಹೊಸ ಕಾರ್ಖಾನೆ ಸ್ಥಾಪನೆ ಪ್ರಸ್ತಾಪವನ್ನು ಸ್ವಲ್ಪ ಮುಂದೂಡಿ ಈಗಿರುವ ಕಾರ್ಖಾನೆಯನ್ನೇ ಸಾಮರ್ಥ್ಯ ಸುಧಾರಣೆಯೊಂದಿಗೆ ಪುನಃಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಕಾರ್ಖಾನೆ ಹೊಂದಿದೆ. ಅದನ್ನು 10,000 ಟನ್‌ಗೆ ಹೆಚ್ಚಿಸುವುದು ನಮ್ಮ ಮುಂದಿರುವ ಗುರಿ. ಆದರೆ, ಸಾಮರ್ಥ್ಯ ಹೆಚ್ಚಿಸಿದರೆ ಅದಕ್ಕೆ ತಕ್ಕಂತೆ ಬೇಕಿರುವ ಕಬ್ಬನ್ನು ಎಲ್ಲಿಂದ ತರುವುದು. ಜಿಲ್ಲೆಯಲ್ಲಿರುವ ಕಬ್ಬು ಬೆಳೆ ವಿಸ್ತೀರ್ಣವೆಷ್ಟು?. ಇತರ ಕಾರ್ಖಾನೆಗಳ ಸ್ಥಿತಿ ಏನು?. ಜಿಲ್ಲೆಯಲ್ಲಿ ಕಬ್ಬು ಇಳುವರಿ ಪ್ರಮಾಣ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಅಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚಿಸಲಾಗಿದೆ. ಕಾರ್ಖಾನೆಯು 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದರೂ ಅಷ್ಟು ಕಬ್ಬನ್ನು ಅರೆಯುತ್ತಿಲ್ಲ. ಆದ್ದರಿಂದ ಸಾಮರ್ಥ್ಯವನ್ನು ಸ್ಥಿರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಚುನಾವಣೆ ಪೂರ್ವದಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಕಾರ್ಖಾನೆಯ ಆರ್ಥಿಕ ಸ್ಥಿತಿ ನೋಡಿಕೊಂಡು ಹಾಗೂ ಆಸ್ತಿಯನ್ನು ಉಳಿಸಿಕೊಂಡು ಕ್ರಿಯಾಯೋಜನೆ ತಯಾರಿಸಲಾಗುವುದು. ಇದಕ್ಕೆ ಪೂರಕವಾಗಿ ಎಥೆನಾಲ್ ಘಟಕ ಸ್ಥಾಪನೆ, ಸಹ ವಿದ್ಯುತ್ ಘಟಕ ನಿರ್ವಹಣೆ(ಕೋ-ಜನ್) ಮಾಡಬೇಕಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಕಬ್ಬು ಬೆಳೆ ಪ್ರಮಾಣ ಕಡಿಮೆಯಾಗುತ್ತಿದೆ. ಕಬ್ಬು ಬದಲಿಗೆ ಭತ್ತ, ತೆಂಗು, ಅಡಿಕೆ ಹಾಗೂ ಇತರ ಆರ್ಥಿಕ ಬೆಳೆಗಳತ್ತ ಚಿತ್ತ ಬದಲಿಸುತ್ತಿದ್ದಾರೆ. 2000 ರೈತರಷ್ಟೇ ಕಬ್ಬು ಬೆಳೆಯುತ್ತಿದ್ದಾರೆ. ಆದ್ದರಿಂದ ಹೆಚ್ಚುವರಿ ನೀರು ಕಬ್ಬು ತಳಿಗಳನ್ನು ರೈತರಿಗೆ ಪರಿಚಯಿಸಬೇಕಿದೆ. ನಾವು ಹೊಸ ಕಾರ್ಖಾನೆ ಸ್ಥಾಪಿಸುವುದು ದೊಡ್ಡದಲ್ಲ. ರೈತರು ನಿರಂತರವಾಗಿ ಕಬ್ಬು ಬೆಳೆಯುವಂತೆ ಮಾಡಬೇಕು. ಮಧ್ಯೆ ಬರಗಾಲ ಬಂದು ಬೆಳೆ ನಿಲ್ಲುವಂತೆ ಆಗಬಾರದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ಡಾ.ರಂಗನಾಥ್, ಎಂಎಲ್‌ಸಿ ದಿನೇಶ್‌ಗೂಳಿಗೌಡ ಹಾಜರಿದ್ದರು.