

ಹುಬ್ಬಳ್ಳಿ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಶಕ್ತಿ ಬಳಸಿ ಭಾರತದಲ್ಲಿ 2030ರ ವೇಳೆಗೆ ಇಂಧನ ಅಗತ್ಯತೆಯನ್ನು ಶೇ. 50ಕ್ಕೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ನಗರದಲ್ಲಿ ಶನಿವಾರ ‘ಏಕ್ ಪೇಡ್ ಮಾ ಕೆ ನಾಮ್’ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಗೆ ಉಗುಳುವಿಕೆ ನಿಗ್ರಹ ಹಾಗೂ ಹಸಿರು ಹೆಚ್ಚಿಸಿ ಪರಿಸರ ಸಂರಕ್ಷಣೆಯಲ್ಲಿ ಭಾರತವಿಂದು ಮುಂಚೂಣಿಯಲ್ಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಭೂಮಿ ತಾಯಿಯನ್ನು ರಕ್ಷಿಸುವ ಸಲುವಾಗಿ ಪ್ರತಿಯೊಬ್ಬರೂ ಹೆತ್ತ ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ಪ್ರಲ್ಹಾದ ಜೋಶಿ ಅವರೂ ತಮ್ಮ ತಾಯಿ ಹೆಸರಿನಲ್ಲಿ ಗಿಡ ನೆಡುವ ಮೂಲಕ ಏಕ್ ಪೇಡ್ ಮಾಕೆ ನಾಮ್ ಅಭಿಯಾನ ಯಶಸ್ವಿಗೊಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಪ್ರಮುಖರಾದ ವೀರಣ್ಣ ಸವಡಿ, ಚನ್ನು ಹೊಸಮನಿ ಇತರರು ಇದ್ದರು.