

ಹಿರೀಸಾವೆ: ಮನೆ, ನಿವೇಶನ ಹಾಗೂ ಆಸ್ತಿ ಹೊಂದಿಲ್ಲದ ಕಡು ಬಡವರಿಗೆ ಮಾತ್ರ ನಿವೇಶನ ನೀಡಲು ನಿರ್ಧರಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2024-25 ನೇ ಸಾಲಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಿವೇಶನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಬೇಡ ಎಂದರು.
ಹಿರೀಸಾವೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಜತೆಗೆ ಹೊರ ಭಾಗದಿಂದ ಬಂದು ಇಲ್ಲಿ ನೆಲೆಸಿ 15 ರಿಂದ 20 ವರ್ಷ ಕಳೆದಿರುವವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಎಲ್ಲಿಯೂ ಪಿತ್ರಾರ್ಜಿತ ಆಸ್ತಿ ಹಾಗೂ ನಿವೇಶನ ಹೊಂದಿರಬಾರದು ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಜೆ.ಸತೀಶ್ ಮಾತನಾಡಿ, ಹಿರೀಸಾವೆ ಸಮೀಪದ ಹೊನ್ನೇನಹಳ್ಳಿ ಗ್ರಾಮದ ಸರ್ವೇ ನಂಬರ್ 31 ರಲ್ಲಿ 11.34 ಎಕರೆ ಪೈಕಿ 4 ಎಕರೆ ಜಾಗವನ್ನು ನಿವೇಶನದ ಸಲುವಾಗಿ ಕಾಯ್ದಿರಿಸಲಾಗಿದೆ. 20*30 ಅಳತೆಯುಳ್ಳ 300 ನಿವೇಶನ ಲಭ್ಯವಿದ್ದು ಸದ್ಯಕ್ಕೆ ಮೊದಲ ಹಂತವಾಗಿ 100 ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಲ್ಪಿಸಲಾಗುವುದು ಎಂದರು.
ಅರ್ಜಿಗಳನ್ನು ಕ್ರಮಬದ್ಧವಾಗಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗುವುದು. ಬಳಿಕ ಅವರ ಮಾರ್ಗದರ್ಶನದಲ್ಲಿ 4 ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಲಾಗುವುದು. ಆ ನಂತರವೇ ನಿವೇಶನಗಳನ್ನು ಫಲಾನುಭವಿಗಳಿಗೆ ಸರ್ಕಾರವು ಮಂಜೂರು ಮಾಡಲಿದೆ ಎಂದು ಮಾಹಿತಿ ನೀಡಿದರು.
ಮಹಿಳೆಯರು, ಅಂಗವಿಕಲರು ಹಾಗೂ ಮದುವೆಯಾಗದಿರುವ ಪುರುಷರೂ ಅರ್ಜಿ ಸಲ್ಲಿಸಬಹುದು. ಈಗಾಗಲೇ ಕಳೆದ ವಾರ ನಡೆಸಿದ ವಾರ್ಡ್ ಸಭೆಯಲ್ಲಿ 168 ಹಾಗೂ ಪ್ರಸ್ತುತ ಗ್ರಾಮಸಭೆಯಲ್ಲಿ 105 ಒಟ್ಟು 273 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ಉಪಾಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ಬಸವರಾಜ್, ಶಂಕರ್, ಲೋಕೇಶ್, ಮಂಜುನಾಥ್, ಪರಮೇಶ್, ಚೇತನ್, ಲಕ್ಷ್ಮಣಗೌಡ, ಶ್ರೀಧರ್, ಭಾರತಿ, ತುಂಗಲಕ್ಷ್ಮೀ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಉಮಾಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪಾರ್ವತಮ್ಮ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಚ್.ಕೆ.ಶರತ್‌ಕುಮಾರ್ ಇದ್ದರು.