

ಅರಕಲಗೂಡು: ನನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲು ಬೆಂಗಳೂರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಎಲ್ಲ ಸದಸ್ಯರು ಧರಣಿ ಹಮ್ಮಿಕೊಳ್ಳುವ ಕುರಿತು ಗುರುವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಪಟ್ಟಣದಲ್ಲಿ ಒಳ ಚರಂಡಿ ಸೌಲಭ್ಯ ಕಲ್ಪಿಸುವ ಸಲುವಾಗಿ 2001ರಲ್ಲೇ 10 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ನೀರಿನ ಬೃಹತ್ ಟ್ಯಾಂಕ್ ನಿರ್ಮಿಸಲಾಗಿದೆ. ನಂತರ ಕಳೆದ 2016ರಲ್ಲಿ ಯುಜಿಡಿ ಕಾಮಗಾರಿಗೆ ಸರ್ಕಾರ 41 ಕೋಟಿ ರೂ.ಗೆ ಅನುಮೋದನೆ ನೀಡಿ ಮೊದಲ ಹಂತವಾಗಿ 18 ಕೋಟಿ ರೂ. ಬಿಡುಗಡೆ ಮಾಡಿತ್ತು. ಪಟ್ಟಣದ ಕೋಟೆ ಭಾಗದ ಕೆಲವೆಡೆ ಪೈಪ್‌ಲೈನ್ ಅಳವಡಿಸಿದ್ದು, ಅರ್ಧಕ್ಕೆ ನಿಂತಿದೆ. 9 ವರ್ಷ ಕಳೆದರೂ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿ ಪುನಾರಂಭಿಸಿಲ್ಲ ಎಂದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಇಂಜಿನಿಯರ್ ಕೇಳಿದರೆ ಗುತ್ತಿಗೆದಾರರಿಗೆ 14 ಕೋಟಿ ರೂ. ಮಂಜೂರಾಗಿರುವುದಾಗಿ ಹೇಳುತ್ತಾರೆ. ಇನ್ನುಳಿದ 4 ಕೋಟಿ ರೂ. ಏನಾಯಿತು ಎಂಬುದರ ಮಾಹಿತಿ ಇಲ್ಲ. 18 ಕೋಟಿ ರೂ. ವೆಚ್ಚದಲ್ಲಿ ಆಗಬೇಕಿದ್ದ ಯುಜಿಡಿ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿದೆ. ಕಾಮಗಾರಿಯಲ್ಲಿ ಆಗಿರುವ ಲೋಪದೋಷ ಕುರಿತು ಸೂಕ್ತ ತನಿಖೆ ಆಗಬೇಕು. ಒಳ ಚರಂಡಿ ಸೌಲಭ್ಯ ಇಲ್ಲದೆ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಿಗದಾಗಿದೆ. ಈ ಕುರಿತು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಪಟ್ಟಣದ ನಿವಾಸಿಗಳ ಹಿತದೃಷ್ಟಿಯಿಂದ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಗಾಂಧಿ ಪ್ರತಿಮೆ ಮುಂದೆ ಎಲ್ಲ ಸದಸ್ಯರು ಪ್ರತಿಭಟನೆ ನಡೆಸಬೇಕು. ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಹೊಣೆ ಹೊತ್ತಿರುವ ಒಳಚರಂಡಿ ಮಂಡಳಿ ಅವ್ಯವಹಾರ ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದರು. ಇದಕ್ಕೆ ಅಧ್ಯಕ್ಷ ಪ್ರದೀಪ್ ಕುಮಾರ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.
ಮಕ್ಕಳು ಕುಳಿತುಕೊಳ್ಳುವ ಟೇಬಲ್ ಮತ್ತಿತರ ಸಾಮಗ್ರಿಗಳನ್ನು ಎಲ್ಲ 17 ವಾರ್ಡ್‌ಗಳಲ್ಲಿರುವ ಅಂಗನವಾಡಿಗಳಿಗೆ ಒದಗಿಸುವಂತೆ ಸದಸ್ಯರಾದ ಹೂವಣ್ಣ, ರಶ್ಮಿ, ಲಕ್ಷ್ಮೀ, ನಿಖಿಲ್‌ಕುಮಾರ್, ಅನುಷಾ ಆಗ್ರಹಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಅಧ್ಯಕ್ಷರು, ಎಲ್ಲ ವಾರ್ಡ್‌ಗಳಲ್ಲಿ ಅಂಗನವಾಡಿಗಳನ್ನು ಪರಿಶೀಲಿಸಿ ಅಗತ್ಯವಿರುವ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ಸ್ಥಾಯಿ ಸಮಿತಿ ರಚನೆ ಸಂಬಂಧ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ರಶ್ಮಿ, ನಿಖಿಲ್ ಕುಮಾರ್ ಮಾತನಾಡಿ, ಅಧ್ಯಕ್ಷರು ಪ್ರಾಮಾಣಿಕವಾಗಿ ಅಧಿಕಾರ ಚಲಾಯಿಸುವಾಗ ಸ್ಥಾಯಿ ಸಮಿತಿ ರಚನೆ ಬೇಕಿಲ್ಲ ಎಂದರು. ಸದಸ್ಯ ಅನಿಕೇತನ್ ಮಾತನಾಡಿ, ಕೃಷ್ಣಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸ್ಥಾಯಿ ಸಮಿತಿ ರಚಿಸಬೇಕು ಎಂದರು. ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, ಎಲ್ಲ ಪಪಂ, ಪುರಸಭೆಗಳಲ್ಲಿ ಇರುವಂತೆ ಇಲ್ಲಿಯೂ ಸ್ಥಾಯಿ ಸಮಿತಿ ರಚಿಸಲಾಗುವುದು ಎಂದರು. ಈ ವೇಳೆ ಸದಸ್ಯರ ನಡುವೆ ಪರ ವಿರೋಧ ಚರ್ಚೆ ನಡೆಯಿತು.
ಉಪಾಧ್ಯಕ್ಷ ಸುಭಾನ ಷರೀಫ್ ಇದ್ದರು.