ನೀರು ಬಿಡುಗಡೆ ವಿರೋಧಿಸಿ ಮತ್ತೆ ಪ್ರತಿಭಟನೆಗೆ ನಿರ್ಧಾರ

mysore
Published on

ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ಮೂಲಕ ಮುಂದಿನ 38 ದಿನಗಳಲ್ಲಿ ನಿತ್ಯ 3,216 ಕ್ಯೂಸೆಕ್ ಹರಿಸಬೇಕೆಂದು ಶಿಫಾರಸು ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಕ್ರಮವನ್ನು ಕಾವೇರಿ ಕ್ರಿಯಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಈ ಕುರಿತು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದೆ.


ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದು, ಇನ್ನೊಂದು ಸಭೆ ಮಾಡಿ ಪ್ರತಿಭಟನೆಯ ದಿನಾಂಕ ನಿಗದಿ ಮಾಡಲು ತೀರ್ಮಾನಿಸಲಾಯಿತು.


ಅಕ್ಟೋಬರ್‌ನಲ್ಲಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮೈಸೂರು ದಸರಾ ಆಚರಣೆ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಇದೀಗ ಮತ್ತೆ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ.

ತಮಿಳುನಾಡಿಗೆ ಮುಂದಿನ 38 ದಿನಗಳಲ್ಲಿ 10.44 ಟಿಎಂಸಿ ನೀರು ಹರಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಆದರೆ, ಕಾವೇರಿ ಜಲಾನಯನ ವ್ಯಾಪ್ತಿಯ ನಾಲ್ಕು ಜಲಾಶಯಗಳಲ್ಲೂ ನೀರಿಲ್ಲ. ರಾಜ್ಯದ ಜನರಿಗೆ ಕುಡಿಯಲು, ಬೆಳೆಗಳಿಗೆ ನೀರು ಕೊಡಲು ಸಮಸ್ಯೆಯಾಗುತ್ತಿದೆ. ಬೇಸಿಗೆ ಕಾಲದಲ್ಲಿ ಇದು ಇನ್ನಷ್ಟು ಉಲ್ಭಣಿಸಲಿದೆ. ಆದರೆ, ವಾಸ್ತವಾಂಶ ಗಮನಿಸದೆ ನೀರು ಹರಿಸಲು ಶಿಫಾರಸು ಮಾಡಿರುವುದು ಸರಿಯಲ್ಲ ಎಂದು ಮುಖಂಡರು ಕಿಡಿಕಾರಿದರು.


ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಕೇಂದ್ರ, ರಾಜ್ಯ ಸರ್ಕಾರ ನಿರ್ಲಕ್ಷೃ ತೋರುತ್ತಿವೆ. ಆದ್ದರಿಂದ ಉಭಯ ಸರ್ಕಾರಗಳಿಗೂ ಬಿಸಿ ಮುಟ್ಟಿಸಬೇಕು. ಅದಕ್ಕಾಗಿ ಹೋರಾಟವನ್ನು ತೀವ್ರಗೊಳಿಸಬೇಕು. ನಗರದ ಎಲ್ಲ ಸಂಘಟನೆಗಳ ಬೆಂಬಲ ಕೋರಬೇಕು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ಬರೆದು ಚಳವಳಿಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಬೇಕು ಎಂದು ನಿರ್ಣಯಿಸಲಾಯಿತು.


ಕಾವೇರಿ ಕ್ರಿಯಾ ಸಮಿತಿಯ ಮುಖಂಡರಾದ ಎಸ್.ಜಯಪ್ರಕಾಶ್, ಮೂಗೂರು ನಂಜುಂಡಸ್ವಾಮಿ, ಎಂ.ಜೆ. ಸುರೇಶ್‌ಗೌಡ, ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಮಹದೇವಸ್ವಾಮಿ, ವಕೀಲ ರಕ್ಷಿತ್, ಮುಖಂಡ ಸ್ವಾಮಿ, ಕರ್ನಾಟಕ ಸೇನೆ ಪಡೆ ಅಧ್ಯಕ್ಷ ತೇಜಸ್ ಲೋಕೇಶ್ ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net