

ಶಿರಸಿ: ಪ್ರಸಕ್ತ ಸಾಲಿನಲ್ಲಿ 14.83 ಕೋಟಿ ರೂ. ಬಜೆಟ್ ಮಂಡಿಸಲು ತೀರ್ಮಾನಿಸಿದೆ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.
ನಗರದಲ್ಲಿ ಶುಕ್ರವಾರ ಬಜೆಟ್ ತಯಾರಿ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. ಸಾರ್ವಜನಿಕರ ಪರವಾಗಿ ಸಭೆಯಲ್ಲಿ ಚರ್ಚೆ ನಡೆಸಿದ ಜಿ. ಜಿ. ಹೆಗಡೆ ಕಡೆಕೋಡಿ, 2010ರಿಂದ ಇಂದಿನವರೆಗೂ ಬಜೆಟ್ ಹಿಂದಿನ ಬಜೆಟ್‌ನ ನಕಲಿನಂತಾಗುತ್ತಿದೆ. ಪೂರ್ವಭಾವಿ ಸಭೆಯಲ್ಲಿ ನಗರ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಪಡೆದರೂ, ಅದನ್ನು ಅಳವಡಿಸಿಕೊಳ್ಳುತ್ತಿಲ್ಲ. ನಗರದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ತಗ್ಗು ಪ್ರದೇಶಗಳ ಸುರಕ್ಷತೆಗೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರಿಂದ ಆಸ್ತಿ ತೆರಿಗೆಯನ್ನು ನಗರಸಭೆ ಕರಾರುವಕ್ಕಾಗಿ ಸಂಗ್ರಹಿಸುತ್ತದೆಯಾದರೂ ನೀರಿನ ತೆರಿಗೆ ಬಗ್ಗೆ ಗಮನ ಹರಿಸುತ್ತಿಲ್ಲ. 2014-15 ರಿಂದಲೂ ಸರ್ಕಾರದಿಂದ ಬರುವ ಆದಾಯದ ಮೇಲೆ ಅವಲಂಬನೆ ಜಾಸ್ತಿ ಆಗುತ್ತಿದ್ದರೆ, ಸ್ವಂತ ಆದಾಯ ಕಡಿಮೆ ಆಗುತ್ತಿದೆ. ಕೆಲ ವಿಧದ ತೆರಿಗೆಗಳ ಸಂಗ್ರಹಣೆ ನಿರ್ಲಕ್ಷ್ಯ ಒಂದು ಹಂತಕ್ಕೆ ಇದು ಕರ್ತವ್ಯ ಲೋಪವಾದಂತೆ ಆಗುತ್ತಿದೆ ಎಂದರು.
ನಗರದಲ್ಲಿ ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಅವು ಪ್ಲಾನ್ ಪ್ರಕಾರ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ನಗರಸಭೆ ಅಧಿಕಾರಿಗಳು ಗಮನಿಸುತ್ತಿಲ್ಲ. ನಗರದಲ್ಲಿ ರಸ್ತೆ ನಿರ್ಮಾಣವಾದರೆ ಒಂದು ವರ್ಷಕ್ಕೇ ಹಾಳಾಗುತ್ತಿದೆ. ನಗರಸಭೆಯ ಉಳಿತಾಯವೂ ವರ್ಷದಿಂದ ವರ್ಷಕ್ಕೆ ಏರಿಕೆ ಆಗಬೇಕಿದೆ. ಸಿಸಿ ಟಿವಿ ಅಳವಡಿಸುವ ಸಲುವಾಗಿ ನಗರಸಭೆ 2023-24 ರಲ್ಲಿ ಹಣ ಮೀಸಲಿಟ್ಟಿಲ್ಲ. ಹೊಸ ಮತ್ತು ಆಧುನಿಕ ಸಿಸಿಟಿವಿ ಅಳವಡಿಸುವ ಮೂಲಕ ಸರ್ವಜನಿಕರ ಸುರಕ್ಷತೆಗೂ ನಗರಸಭೆ ಗಮನ ಹರಿಸಬೇಕು. ನಗರದ ರಾಜಕಾಲುವೆ ಸಮರ್ಪಕವಾಗಿರದೇ ಬಾವಿ ನೀರಿನ ಸ್ಥಿತಿ ಹಾಳಾಗುತ್ತದೆ. ನಗರದಲ್ಲಿ ಕಸದ ಗಾಡಿಗಳು ಮುಚ್ಚಿಗೆ ಇಲ್ಲದೇ ಸಾಗುತ್ತಿದ್ದು, ರಸ್ತೆ ಮೇಲೆ ಕಸ ಬೀಳುತ್ತಿವೆ. ನಗರದ ಉದ್ಯಾನಗಳ ನಿರ್ವಹಣೆ ಸರಿ ಆಗುತ್ತಿಲ್ಲ. ನಿರ್ವಹಣೆಗೆ ಮೀಸಲಿಟ್ಟ ಹಣ ಎಲ್ಲಿ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಎಲ್ಲ ಸಂಗತಿಗಳನ್ನೂ ಬಜೆಟ್‌ನಲ್ಲಿ ಗಮನಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಇತರರಿದ್ದರು.