ಗಾಂಧಿ ಭವನದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆಗೆ ನಿರ್ಧಾರ

1adarshkdga8
Published on

ಮಡಿಕೇರಿ: ಗಾಂಧಿ ಭವನವನ್ನು ಗಾಂಧೀಜಿರವರ ಚಿಂತನೆ, ತತ್ವ ಹಾಗೂ ಅಧ್ಯಯನಕ್ಕಾಗಿಯೇ ಮೀಸಲಿಡಬೇಕಿದ್ದು, ಆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು.


ನಗರದ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಗಾಂಧಿ ಭವನ ನಿರ್ವಹಣೆ ಹಾಗೂ ಗೌರವ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.


ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ಹಾಗೂ ಶಾಲಾ-ಕಾಲೇಜುಗಳ ಕಾರ್ಯಕ್ರಮ ಆಯೋಜನೆಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮ ಆಯೋಜಿಸಲು ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಏರ್ಪಡಿಸಲು ಶುಲ್ಕ ಪಾವತಿಯ ವೆಚ್ಚ ನಿಗಧಿ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.


ಆ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳಿಗೆ ಒಂದು ದಿನಕ್ಕೆ ೩ ಸಾವಿರ ರೂ. ಹಾಗೂ ಶಾಲಾ ಕಾಲೇಜು ಕಾರ್ಯಕ್ರಮಗಳಿಗೆ ೨ ಸಾವಿರ ರೂ. ನಿಗದಿ ಮಾಡಲು ಜಿಲ್ಲಾಧಿಕಾರಿರವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸರ್ಕಾರಿ ಅಥವಾ ಶಾಲಾ-ಕಾಲೇಜು ಕಾರ್ಯಕ್ರಮ ಆಯೋಜನೆ ಸಂಬಂಧ ಮೂರು ದಿನಕ್ಕಿಂತ ಹೆಚ್ಚು ನೀಡದಿರುವುದು, ಜತೆಗೆ ಬೆಳಗ್ಗೆ ೮ ರಿಂದ ಸಂಜೆ ೬ ಗಂಟೆ ವರೆಗೆ ಮಾತ್ರ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.


ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಗಾಂಧಿ ಭವನದಲ್ಲಿ ಸದಾ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಕರು ಗಮನಹರಿಸಬೇಕು. ಜತೆಗೆ ಗಾಂಧಿ ಭವನದ ಯಾವುದೇ ವಸ್ತುಗಳು ಹಾಳಾಗದಂತೆ ಸಂಘಟಕರು ನೋಡಿಕೊಳ್ಳಬೇಕು. ತಪ್ಪಿದಲ್ಲಿ ಕಾರ್ಯಕ್ರಮ ಆಯೋಜಕರೇ ಹೆಚ್ಚಿನ ಶುಲ್ಕ ಭರಿಸಬೇಕಿದೆ ಎಂದು ಹೇಳಿದರು.


ಗಾಂಧಿ ಭವನ ನಿರ್ವಹಣೆ ಹಾಗೂ ಗೌರವ ಸಲಹಾ ಸಮಿತಿ ಸಭೆಯನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಆಹ್ವಾನಿಸಬೇಕು. ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮ ಸಂದರ್ಭದಲ್ಲಿ ಗಾಂಧಿ ಚಿಂತನೆ ಒಳಗೊಂಡ ನಮನ ಮೂಲಕ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.


ಸರ್ವೋದಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗಾಂಧಿ ಭವನದಲ್ಲಿ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ತುರ್ತಾಗಿ ಹೊರಗುತ್ತಿಗೆಯಡಿ ಒಬ್ಬ ನೌಕರರನ್ನು ನಿಯೋಜಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ನಿಯಮಾನುಸಾರ ಮೂರು ತಿಂಗಳಿಗೊಮ್ಮೆಯಂತೆ ಕೊಟೇಷನ್ ಮಾದರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಲು ಅನುಮತಿ ನೀಡಿದರು.


ಸಭೆಯಲ್ಲಿ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಪೊಲೀಸ್ ಇಲಾಖೆಯ ಇನ್ಸ್‌ಪೆಕ್ಟರ್ ಐ.ಪಿ.ಮೇದಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಮನ್ವಯಾಧಿಕಾರಿ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಯಂತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net