ಕಸಾಪದಿಂದ ಗ್ರಾಮಸಿರಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ

kasapa
Published on

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೨೦೨೩-೨೪ನೇ ಸಾಲಿನಲ್ಲಿ ಸುವರ್ಣ ಕರ್ನಾಟಕ ೫೦ರ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ತಾಲೂಕಿನ ಒಂದು ಹೋಬಳಿ ಕೇಂದ್ರದಲ್ಲಿ ಸುವರ್ಣ ಸಂಭ್ರಮ ಗ್ರಾಮ ಸಿರಿ ಕಾರ್ಯಕ್ರಮವನ್ನು ನಡೆಸಲು ಕೊಡಗು ಜಿಲ್ಲೆಯ ೫ ತಾಲೂಕು ಕಸಾಪ ಅಧ್ಯಕ್ಷರುಗಳ ಸಭೆಯಲ್ಲಿ ನಿರ್ಧರಿಸಿದೆ.


ನಗರದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷರುಗಳ ಸಭೆ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್‌ರವರ ಗೈರು ಹಾಜರಿಯಲ್ಲಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸುವರ್ಣ ಕರ್ನಾಟಕ ೫೦ರ ಸಂಭ್ರಮದ ಗ್ರಾಮಸಿರಿ ಕಾರ್ಯಕ್ರಮವನ್ನು ಎಲ್ಲರ ಸಹಕಾರ ಪಡೆದು ಅರ್ಥಪೂರ್ಣಗೊಳಿಸಬೇಕೆಂದು ಕರೆ ನೀಡಿದರು.


ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಆಪ್ ಮೂಲಕ ಸದಸ್ಯತ್ವ ನೋಂದಣಿ ಆರಂಭಿಸಿದ್ದು, ಸರ್ವರ್ ಸಮಸ್ಯೆ ಎದುರಾಗಿರುವುದನ್ನು ಗಮನಿಸಿ ರಾಜ್ಯ ಸಮಿತಿ ಅರ್ಜಿಗಳನ್ನು ಮುದ್ರಿಸಿ ಕಳುಹಿಸಿದೆ. ಜಿಲ್ಲಾ ಸಮಿತಿ, ತಾಲೂಕು ಸಮಿತಿ ಮತ್ತು ಹೋಬಳಿ ಸಮಿತಿಗಳು ಸದಸ್ಯತ್ವ ಆಂದೋಲನವನ್ನು ಆರಂಭಿಸಬೇಕು. ಆ ಮೂಲಕ ಕೊಡಗು ಜಿಲ್ಲಾ ಕಸಾಪದ ಸದಸ್ಯರ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕು ಎಂದರು.


೨೦೨೨-೨೩ನೇ ಸಾಲಿನ ೨೫ ದತ್ತಿ ಕಾರ್ಯಕ್ರಮಗಳನ್ನು ಜಿಲ್ಲೆ, ತಾಲೂಕು ಹಾಗೂ ಹೋಬಳಿ ಕಸಾಪ ಸಮಿತಿಗಳು ನಡೆಸಿದ್ದು, ೨೩-೨೪ನೇ ಸಾಲಿನ ೨೬ ದತ್ತಿಗಳನ್ನು ಜಿಲ್ಲೆ ಹಾಗೂ ತಾಲ್ಲೂಕು ಕ.ಸಾ.ಪ ಘಟಕಗಳಿಗೆ ಹಂಚಲಾಗಿದೆ. ಆಯಾ ತಾಲೂಕಿನ ಹೋಬಳಿ ಘಟಕಗಳ ಸಹಕಾರದೊಂದಿಗೆ ೨೦೨೪ರ ಜ.೩೦ರೊಳಗೆ ಕಾರ್ಯಕ್ರಮ ಪೂರ್ಣಗೊಳಿಸಬೇಕು ಎಂದರು.


ಕೆಲವು ದತ್ತಿಗಳಿಗೆ ನೀಡಲಾದ ಹಣ ಕಡಿಮೆ ಇದ್ದು, ಅದರ ವಾರ್ಷಿಕ ಬಡ್ಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸಲು ಸಾಧ್ಯವಾಗದೇ ಇರುವುದರಿಂದ ಅಂತಹ ದತ್ತಿಗಳನ್ನು ಆಯೋಜಿಸುವಾಗ ತಾಲೂಕಿನ ೨ ದತ್ತಿಗಳನ್ನು ಒಟ್ಟಾಗಿ ಸೇರಿಸಿ ನಡೆಸುವುದು ಸೂಕ್ತ. ೨ ದತ್ತಿಗಳ ಉದ್ದೇಶಕ್ಕೆ ತಕ್ಕಂತೆ ಪ್ರತ್ಯೇಕವಾಗಿ ಉಪನ್ಯಾಸಕರಿಂದ ಉಪನ್ಯಾಸ ನಡೆಸಬೇಕು. ಕಡಿಮೆ ಹಣದಲ್ಲಿ ದತ್ತಿ ಸ್ಥಾಪಿಸಿರುವ ದಾನಿಗಳಿಗೆ ಅಥವಾ ಅವರ ಕುಟುಂಬದವರಿಗೆ ಪರಿಷತ್ತಿನಿಂದ ಪತ್ರ ಬರೆದು ಹಣವನ್ನು ಹೆಚ್ಚಿಸಲು ಕೋರುವಂತೆ ಟಿ.ಪಿ.ರಮೇಶ್ ಸಲಹೆ ನೀಡಿದರು.


ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ, ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ಹಾಗೂ ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿ ಎ.ಪಿ.ವೀರರಾಜು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net