

ಗೋಣಿಕೊಪ್ಪ: ಆಯುಧ ಪೂಜಾ ದಿನದಂದು ಸಾರ್ವಜನಿಕ ಅನ್ನದಾನದ ಮೂಲಕ ಗಮನ ಸೆಳೆದಿರುವ ಗೋಣಿಕೊಪ್ಪಲುವಿನ ಮಾರ್ಕೆಟ್ ಆವರಣದ ನವಚೇತನ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಕರ್ಣರಾಜ್(ತಂಬಿ), ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ.ಅಸ್ಗರ್ ನೇಮಕಗೊಂಡಿದ್ದಾರೆ.
ಮಾರ್ಕೆಟ್ ಆವರಣದಲ್ಲಿ ಸಭೆ ಸೇರಿದ್ದ ನವಚೇತನ ದಸರಾ ಸಮಿತಿಯ ಆಡಳಿತ ಮಂಡಳಿಯಲ್ಲಿ ಕಳೆದ ಸಾಲಿನ ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು. 6 ಲಕ್ಷ ರೂ. ಯೋಜನೆಯಲ್ಲಿ ದಸರಾ ಉತ್ಸವವನ್ನು ಹಾಗೂ ಅನ್ನದಾನವನ್ನು ಯಶಸ್ವಿಯಾಗಿ ನಡೆಸಲು ಆಡಳಿತ ಮಂಡಳಿಯು ನಿರ್ಧಾರ ಕೈಗೊಂಡಿತ್ತು.
ಸಮಿತಿಯ ಉಳಿಕೆ ಹಣದಲ್ಲಿ ಗ್ರಾಮ ಪಂಚಾಯಿತಿಯ ನಿವೇಶನದಲ್ಲಿ ದಸರಾ ಸಮಿತಿಯ ನೂತನ ಕಟ್ಟಡ ನಿರ್ಮಾಣವಾಗಿದ್ದು ಈ ಕಚೇರಿಯನ್ನು ಲೋಕಾರ್ಪಣೆ ಮಾಡುವ ಬಗ್ಗೆ ಸಭೆ ಅನುಮೋದನೆ ನೀಡಿತು.
ಸಾರ್ವಜನಿಕರ ಸಹಕಾರದಿಂದ ಸರ್ವಧರ್ಮೀಯರ ಒಗ್ಗೂಡುವಿಕೆಯಿಂದ ಪ್ರತಿವರ್ಷವು ಅನ್ನಸಂತರ್ಪಣೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿಯೂ ಸಾವಿರಾರು ನಾಗರಿಕರಿಗೆ ಅನ್ನದಾನ ನೀಡಬೇಕು. ಯಾವುದೇ ಕೊರತೆ ಎದುರಾಗದಂತೆ ಹೆಚ್ಚಿನ ಜಾಗೃತಿ ವಹಿಸಲು ಹಿರಿಯ ಸದಸ್ಯರಾದ ಎಂ.ಆರ್.ರಫೀಕ್ ಸಭೆಗೆ ತಿಳಿಸಿದರು. ಇದಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು. ಆಯುಧ ಪೂಜೆ ಹಾಗೂ ದಸರಾ ಉತ್ಸವದಂದು ಮಾರ್ಕೆಟ್ ಆವರಣವನ್ನು ಸಿಂಗರಿಸಿ ಸ್ವಚ್ಛತೆ ಕಾಪಾಡಲು ಸದಸ್ಯ ಕೆ.ಪಿ.ಜಲೀಲ್ ಸಲಹೆ ನೀಡಿದರು.
35ನೇ ವರ್ಷದ ದಸರಾ ಸಮಿತಿಯ ಉಪಾಧ್ಯಕ್ಷರಾಗಿ ಸಚಿನ್ ತಿಮ್ಮಯ್ಯ, ಖಜಾಂಚಿಯಾಗಿ ಎಂ.ಆರ್.ರಫೀಕ್, ಸಂಚಾಲಕರಾಗಿ ಕೆ.ಪಿ.ಅಬ್ದುಲ್ ಜಲೀಲ್, ಅನ್ನದಾನ ಸಮಿತಿಯ ಅಧ್ಯಕ್ಷರಾಗಿ ಸಮೀರ್, ಉಪಾಧ್ಯಕ್ಷರಾಗಿ ಅಮಾನ್, ಗೌರವ ಅಧ್ಯಕ್ಷರಾಗಿ ಡಿ.ಎಚ್.ಶಂಕರ್‌ರನ್ನು ಆಯ್ಕೆ ಮಾಡಲಾಯಿತು.
ದಸರಾ ಸಮಿತಿಗೆ ಮಂಜೂರಾದ ಖಾಲಿ ನಿವೇಶನದಲ್ಲಿ ವಿಶೇಷ ಆಸಕ್ತಿ ವಹಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸಿರುವ ಪ್ರಸ್ತುತ ಅಧ್ಯಕ್ಷರಾಗಿರುವ ಕರ್ಣರಾಜ್ (ತಂಬಿ) ಅವರನ್ನು ಕಾರ್ಯಕ್ರಮ ದಿನದಂದು ಸನ್ಮಾನಿಸಿ ಗೌರವಿಸುವಂತೆ ಸಭೆಯು ನಿರ್ಣಯ ಕೈಗೊಂಡಿತು. ಸಂಚಾಲಕರಾದ ಜಲೀಲ್ ಸ್ವಾಗತಿಸಿ, ಸದಸ್ಯರಾದ ಅಬ್ದುಲ್ ಸಮ್ಮದ್ ವಂದಿಸಿದರು.