

ಹನೂರು :ಸಾಮಾಜಿಕ ಸೇವಾ ಮನೋಭಾವದ ಉದ್ದೇಶದಿಂದ ನಿರ್ಗತಿಕರಿಗೆ ಅನಾಥಾಶ್ರಮ ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಶಾಲೆಯನ್ನು ತೆರೆದು ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹುಲ್ಲೇಪುರದ ಎಸ್.ವಿ.ಜೆ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ವಿ. ಸಾಂಬಾಜಿ ರಾವ್ ತಿಳಿಸಿದರು.
ತಾಲೂಕಿನ ಮಂಗಲ ಸಮೀಪದ ಹುಲ್ಲೇಪುರದ ಮಾದಪ್ಪನ ಭಕ್ತರ ತಂಗುದಾಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್.ವಿ.ಜೆ. ಚಾರಿಟಬಲ್ ಟ್ರಸ್ಟ್ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.
ತಂದೆಯ ಪ್ರೇರಣೆಯಂತೆ ಸಾಮಾಜಿಕ ಸೇವಾ ಸೇವಾ ಮನೋಭಾವ ಹೊಂದಿದ್ದು, ಈಗಾಗಲೇ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗ್ರಾಮಸ್ಥರ ಸಹಕಾರ ಪಡೆದು ತಂಗುದಾಣ ನಿರ್ಮಿಸಲಾಗಿದೆ. ಇದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ದಿಸೆಯಲ್ಲಿ ಕುಟುಂಬಸ್ಥರ ಇಚ್ಛೆಯಂತೆ ಮುಂದಿನ ದಿನಗಳಲ್ಲಿ ನಿರ್ಗತಿಕರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಅನಾಥಾಶ್ರಮ ತೆರೆಯಲು ನಿರ್ಧರಿಸಲಾಗಿದೆ. ಜತೆಗೆ ಈ ಭಾಗದಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡವರು ಹೆಚ್ಚಾಗಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಕಷ್ಟ ಪಡುತ್ತಿದ್ದಾರೆ. ಇದನ್ನು ಮನಗಂಡು ಇಂಗ್ಲಿಷ್ ಮಾಧ್ಯಮದ ಶಾಲೆ ತೆರೆಯಲು ನಿರ್ಧರಿಸಲಾಗಿದೆ. ಹಾಗೆಯೇ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಗೋ ಶಾಲೆ ತೆರೆಯಲು ಚಿಂತನೆ ನಡೆಸಲಾಗಿದೆ. ಆದ್ದರಿಂದ ಈ ಸಾಮಾಜಿಕ ಸೇವಾ ಕಾರ್ಯಗಳಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಟ್ರಸ್ಟ್‌ನ ಕಾರ್ಯದರ್ಶಿ ಡಾ. ಕೆ. ಮಾಲಿನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ವಿಪುಲವಾಗಿವೆ. ಆದರೆ ಈ ಭಾಗದಲ್ಲಿ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಇವರಿಗೆ ಆತ್ಮವಿಶ್ವಾಸ ಬೆಳೆಸುವುದರ ಜತೆಗೆ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಆರೋಗ್ಯ ಉಚಿತಾ ತಪಾಸಣಾ ಶಿಬಿರ ಆಯೋಜಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಮಾರ್ಗದರ್ಶನ ಅಗತ್ಯ ಎಂದರು.
ಟ್ರಸ್ಟ್‌ನ ಉಪಾಧ್ಯಕ್ಷ ಅಮೋಘ ಎಸ್. ಜಗ್ತಾಪ್, ಜಂಟಿ ಕಾರ್ಯದರ್ಶಿ ವಿದ್ಯಾಶ್ರೀ, ಸದಸ್ಯರಾದ ಗುರುಮಲ್ಲಾರಾಧ್ಯ, ಮಲ್ಲಿಕಾರ್ಜುನ, ಪ್ರಭು, ಪ್ರಕಾಶ್, ಶಿವರಾಮು, ನಂಜಪ್ಪ, ಡಿ. ಸುಂದರ್, ಚಂದ್ರು, ಮುಖಂಡರಾದ ಪುಟ್ಟಸ್ವಾಮಿ, ಮರಿಸ್ವಾಮಿ ಹಾಗೂ ಇನ್ನಿತರರು ಇದ್ದರು.