

ಬೀರೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ 2025-26ನೇ ಸಾಲಿಗೆ ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡುವ ಕುರಿತು ಸರ್ಕಾರದ ಆದೇಶದಂತೆ ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿಯಂತೆ ಶೇ.3ರಷ್ಟು ತೆರಿಗೆ ಹೆಚ್ಚಿಸಲು ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪುರಸಭೆ ವ್ಯಾಪ್ತಿಯಲ್ಲಿ 2025-26ನೇ ಸಾಲಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗದಿದ್ದಲ್ಲಿ ಆಸ್ತಿ ತೆರಿಗೆ ಮೊತ್ತದ ಶೇ.3 ರಿಂದ ಶೇ.5 ರವರೆಗೆ ದರ ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು.ಸದಸ್ಯರು ಶೇ.5 ಹೆಚ್ಚಳದಿಂದ ಜನರಿಗೆ ಹೊರಯಾಗುತ್ತದೆ ಎಂದು ಶೇ.3ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದರು.
ಸಕ್ಕಿಂಗ್ ಯಂತ್ರ ಮತ್ತು ಸಕ್ಕಿಂಗ್ ಕಂ ಜೆಟ್ಟಿಂಗ್ ಯಂತ್ರದ ಬಾಡಿಗೆ ಶುಲ್ಕವನ್ನು 750 ರೂ.ಗೆ ನಿಗದಿಪಡಿಸಲಾಯಿತು. ವಾರದ ಸಂತೆ ಸುಂಕ ವಸೂಲಾತಿ ಹಕ್ಕು 3.89 ಲಕ್ಷ ರೂ. ದಿನವಹಿ ಹಂಗಾಮಿ ನೆಲಬಾಡಿಗೆ ವಸೂಲಿ ಮಾಡುವ ಹಕ್ಕನ್ನು 4.20 ಲಕ್ಷ ರೂಗೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ತರೀಕೆರೆಯ ಹಳಿಯೂರು ಸಮಿಪದ ನೀರು ಶುದ್ಧೀಕರಣ ಘಟಕಕ್ಕೆ ಕ್ಲೋರಿಂಗ್ ಗ್ಯಾಸ್ ಸರಬರಾಜು ಮಾಡಲು ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಒಪ್ಪಿಗೆ ಸೂಚಿಸಲಾಯಿತು.