18ರಂದು ಘಟಕ ಉದ್ಘಾಟನೆಗೆ ನಿರ್ಧಾರ

3 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ರಾಮನಗರದ ಆದರ್ಶ ಬಾಲಿಕಾ ಪ್ರೌಢ ಶಾಲೆಯಲ್ಲಿ ಸಕ್ಷಮ ಜಿಲ್ಲಾ ಘಟಕದ ಮೊದಲ ಸಭೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸದಸ್ಯ ಶ್ರೀಧರ ನಾಡಗೀರ ನೇತೃತ್ವದಲ್ಲಿ ಮಂಗಳವಾರ ಜರುಗಿತು.
ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವಿಪಕ್ಷ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಅವರಿಗೆ ಸನ್ಮಾನಿಸುವ ಕುರಿತು ಚರ್ಚಿಸಲಾಯಿತು. ಬಳಿಕ ಜ. 18ರಂದು ಸಮಾರಂಭ ಏರ್ಪಡಿಸುವ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಶ್ರೀಧರ ನಾಡಗೀರ ಮಾತನಾಡಿ, ಭವಿಷ್ಯದಲ್ಲಿ ಸಕ್ಷಮ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸುವ ಗುರುತರ ಜವಾಬ್ದಾರಿ ಪದಾಧಿಕಾರಿಗಳ ಮೇಲಿದೆ. ಹೀಗಾಗಿ ತಮ್ಮ ಜವಾಬ್ದಾರಿ ಅರಿತು, ತಾಲೂಕು ಮಟ್ಟದ ಸಂಘಟನೆ ರಚಿಸುವಂತೆ ಹೇಳಿದರು.
ಸಕ್ಷಮ ಉತ್ತರ ಪ್ರಾಂತ ಉಪಾಧ್ಯಕ್ಷ ಡಾ. ವಿಜಯ ವಿಠ್ಠಲ ಮನಗೂಳಿ ಮಾತನಾಡಿ, ಭಾರತ ಸರ್ಕಾರದ ಅಂಗವಿಕಲರ ಸಂಸ್ಥೆಯನ್ನು ಧಾರವಾಡಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಇದರ ಮೂಲಕ ಅಂಗವಿಕಲರ ಸಮಸ್ಯೆ ನಿವಾರಿಸಲಾಗುವುದು. ಅಂಗವಿಕಲರು ಎಂಬ ಕೀಳರಿಮೆ ಬಿಡಬೇಕು. ವಿಕಲತೆ ದೇಹಕ್ಕೆ ಹೊರತು ಮನಸ್ಸಿಗಲ್ಲ. ನ್ಯೂನ್ಯತೆ ಮೆಟ್ಟಿ ನಿಂತು ಸಾಧನೆ ಮಾಡಿದ ಅನೇಕರು ನಮ್ಮ ಮಧ್ಯೆ ಇದ್ದಾರೆ. ಅಂತವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯ ಕಟ್ಟಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಕ್ಷಮ ಜಿಲ್ಲಾಧ್ಯಕ್ಷ ಕೇಶವ ತೆಲಗು ಮಾತನಾಡಿದರು. ಸಕ್ಷಮ ಖಜಾಂಚಿಯಾಗಿ ಮಂಜುನಾಥ, ಮಹಿಳಾ ಪ್ರತಿನಿಧಿಯಾಗಿ ಸರ್ವಮಂಗಳಾ ಅವರನ್ನು ಸರ್ವಾನುಮತದಿಂದ ನೇಮಿಸಲಾಯಿತು.
ಉಪಾಧ್ಯಕ್ಷ ಡಾ. ಅನಿರುದ್ಧ ಕುಲಕರ್ಣಿ, ಕಾರ್ಯದರ್ಶಿ ಬಸವರಾಜ ಮಠಪತಿ, ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ವಿ.ಅಚ್ಯುತ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net