

ಕಲಾದಗಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15 ರಂದು ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮವನ್ನು ಗ್ರಾಮ ಸೇರಿ ಗ್ರಾಪಂ ವ್ಯಾಪ್ತಿಯಲ್ಲೆಡೆ ಹಬ್ಬದ ವಾತಾವರಣದಂತೆ ಆಯೋಜಿಸಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಿದ್ಧಗೊಂಡಿರುವ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಲಾಯಿತು.
ಕಲಾದಗಿ ಗ್ರಾಪಂ ವ್ಯಾಪ್ತಿಯ ಬಾಗಲಕೋಟೆ-ಖಜ್ಜಿಡೋಣಿ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಲಿರುವ ಮಾನವ ಸರಪಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು, ಯಾವುದೇ ಅವ್ಯವಸ್ಥೆಯಾಗದಂತೆ ಕಟ್ಟೆಚ್ಚರ ವಹಿಸುವ ಬಗ್ಗೆ ನಿರ್ಧರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಪಿಡಿಒ ಬಿ.ಎಲ್. ಹವಾಲ್ದಾರ್, ಕಾರ್ಯದರ್ಶಿ ಎಸ್.ಎಸ್.ಪರಸಣ್ಣವರ್, ಸ್ವಸಹಾಯ ಸಂಘಗಳ ವಲಯ ಮೇಲ್ವಿಚಾರಕ ಹುಲ್ಲಪ್ಪ ದುರ್ಗದ, ಗ್ರಾಪಂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪತ್ರಕರ್ತರು ಉಪಸ್ಥಿತರಿದ್ದರು.