ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧಾರ

hdmc photo
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಬಿಆರ್​ಟಿಎಸ್ (ತ್ವರಿತ ಬಸ್ ಸಂಚಾರ ವ್ಯವಸ್ಥೆ) ಮಾರ್ಗದಲ್ಲಿ ಪಾಲಿಕೆ ಸದಸ್ಯರ ವಾಹನಗಳ ಸಂಚಾರಕ್ಕೆ ಅನುಮತಿ ಪಡೆಯುವ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲು ಬಿಆರ್​ಟಿಎಸ್ ಕಂಪನಿಯ ಹಿರಿಯ ಅಧಿಕಾರಿಗಳ ಜತೆ 15 ದಿನಗಳೊಳಗೆ ಸಭೆ ನಡೆಸಲು ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇಲ್ಲಿಯ ಪಾಲಿಕೆಯ ಸಭಾಭವನದಲ್ಲಿ ಶುಕ್ರವಾರ ಸಭೆ ನಡೆಯಿತು. ಸಭೆಗೆ ಬಿಆರ್​ಟಿಎಸ್​ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಎಸ್.ಎಂ. ಬಿಜಾಪುರ ಹಾಜರಾಗಿದ್ದರು. ಸಭೆಗೆ ಎಇಇ ಅವರನ್ನು ಕಳುಹಿಸಿರುವುದರಿಂದ ದೃಢ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಇವರ ಮುಂದೆ ಏನು ಮಾತನಾಡಿದರೂ ಪ್ರಯೋಜನವಿಲ್ಲ. ಬಿಆರ್​ಟಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕೆಂದು ಸದಸ್ಯರು ಆಗ್ರಹಿಸಿದರು.

ಹು-ಧಾ ನಡುವಿನ ರಸೆ್ತಯ ಅರ್ಧಭಾಗವನ್ನು ಪಡೆದಿರುವ ಬಿಆರ್​ಟಿಎಸ್ ಯೋಜನೆಯಿಂದ ಮಿಕ್ಸಡ್ ಟ್ರಾಫಿಕ್ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರವು ಕಷ್ಟಕರವಾಗಿದೆ ಎಂದು ಬಿಜೆಪಿ ಸದಸ್ಯ ಉಮೇಶಗೌಡ ಕೌಜಗೇರಿ ದೂರಿದರು.

ಬಿಆರ್​ಟಿಎಸ್ ಮಾರ್ಗದಲ್ಲಿ ಪಾಲಿಕೆ ಸದಸ್ಯರ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ಹಾಗೂ ಮಾರ್ಗದಲ್ಲಿ ನಾಲ್ಕು ಕಡೆ ನೀರು ನಿಲ್ಲುವ ಬಗ್ಗೆ ಇತ್ತೀಚೆಗೆ ಬಿಆರ್​ಟಿಎಸ್ ಕಂಪನಿಯ ಬೋರ್ಡ್ ಮೀಟಿಂಗ್​ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ಸಾರಿಗೆ ಆಯುಕ್ತರ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕಂಪನಿಯವರು ಹೇಳಿದ್ದಾರೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸಭೆಯ ಗಮನಕ್ಕೆ ತಂದರು.

ಬಿಆರ್​ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದರೆ ಅದರ ಉದ್ದೇಶ ಈಡೇರುತ್ತದೆ. ಬೇರೆ ಯಾವ ವಾಹನವು ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಬಾರದು ಎಂದು ಬಿಜೆಪಿಯ ತಿಪ್ಪಣ್ಣ ಮಜ್ಜಗಿ ಅಭಿಪ್ರಾಯಿಸಿದರು. ನವನಗರ ಬಳಿ ಬಿಆರ್​ಟಿಎಸ್​ನವರು ಗಟಾರ ನಿರ್ವಿುಸಿದ್ದಾರೆ. ಅದರಲ್ಲಿ ಹೂಳು ತುಂಬಿದ್ದು, ಯಾವಾಗ ಹೂಳು ಎತ್ತುತ್ತಾರೆ ಎಂದು ಬಿಜೆಪಿ ಸದಸ್ಯೆ ಸುನೀತಾ ಮಾಳವದಕರ ಪ್ರಶ್ನಿಸಿದರು.

ಕಾಂಗ್ರೆಸ್​ನ ಮಯೂರ ಮೋರೆ ಮಾತನಾಡಿ, ಬಿಆರ್​ಟಿಎಸ್​ನಿಂದ ಬಹಳ ಜನರಿಗೆ ತೊಂದರೆ ಆಗುತ್ತಿದೆ. ಇವುಗಳ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕವಾದ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು. 15 ದಿನಗಳೊಳಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಮೇಯರ್ ರಾಮಪ್ಪ ಬಡಿಗೇರ ರೂಲಿಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net