

ಶಿರಸಿ: ಸರ್ಕಾರ ನೀಡಿದ 4 ರೂ.ಗಳನ್ನು ನೇರವಾಗಿ ಹಾಲು ಉತ್ಪಾದಕರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯ ಹೈನುಗಾರರ ಬಹುದಿನದ ಬೇಡಿಕೆಯಾಗಿದ್ದ ಹಾಲಿನ ದರ ಏರಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ನಮ್ಮ ಒಕ್ಕೂಟದಿಂದ ಏ. 1ರಿಂದ ನಂದಿನಿ ಪ್ಯಾಕೆಟ್ ಮೇಲಿನ ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲಿದ್ದೇವೆ. ಈ ಹೆಚ್ಚುವರಿ ಹಣವನ್ನು ಸಂಪೂರ್ಣವಾಗಿ ಹಾಲು ಉತ್ಪಾದಕ ರೈತರಿಂದ ಖರೀದಿಸಲ್ಪಟ್ಟ ಪ್ರತಿ ಲೀಟರ್ ಹಾಲಿಗೆ ನೀಡಬೇಕೆಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.