

ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ 2022-23ನೇ ಸಾಲಿನಲ್ಲಿ 68,61,126ರೂ. ಲಾಭಗಳಿಸಿದ್ದು ಸಂಘದ ಶೇರುದಾರ ಸದಸ್ಯರಿಗೆ ಶೇ. 10ರಷ್ಟು ಲಾಭಾಂಶ ನೀಡಲು ತೀರ್ವನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಹೇಳಿದರು.
ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಂಘವು ಸದಸ್ಯರಿಗೆ ಬೇಕಾಗುವ ಹಣಕಾಸು ಹಾಗೂ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಕಾಲಕಾಲಕ್ಕೆ ಪೂರೈಸುವುದರೊಂದಿಗೆ ಸದಸ್ಯರ ಹಿತ ಕಾಪಾಡುತ್ತ ಬಂದಿದೆ.
ಅಡಕೆ ತೋಟಕ್ಕೆ ಎಲೆಚುಕ್ಕೆ ರೋಗದ ಸಮಸ್ಯೆ ಕಾಡುತ್ತಿದ್ದು ಸದಸ್ಯರು ಅದಕ್ಕೆ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಆರ್ಥಿಕವಾಗಿ ಮಿತವ್ಯಯ ಸಾಧಿಸಬೇಕು.
ಸಂಘದ ಕಿರಾಣಿ ವಿಭಾಗದಲ್ಲಿ ಸೂಪರ್ ಮಾರ್ಕೆಟ್ಅನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದು ಸದಸ್ಯರಿಗೆ ಬೇಕಾಗುವ ಎಲ್ಲ ಬಗೆಯ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ.
ಸಂಘದ ಸದಸ್ಯರಿಗೆ ಹೈಟೆಕ್ ದೋಟಿ ವ್ಯವಸ್ಥೆ ಮಾಡಲಾಗಿದ್ದು ಕೃಷಿಗೆ ಬೇಕಾಗುವ ಎಲ್ಲ ಯಂತ್ರೋಪಕರಣಗಳನ್ನೂ ವ್ಯವಸ್ಥೆಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ಚೌಡು ಗೌಡ ಬಿಳೆಕಲ್ಮನೆ, ನಿರ್ದೇಶಕರಾದ ಸುಬ್ರಾಯ ಹೆಗಡೆ ಸಾಯಿಮನೆ, ಮಹಾಬಲೇಶ್ವರ ಹೆಗಡೆ ವಟರಜಡ್ಡಿ, ಶ್ರೀಪತಿ ಹೆಗಡೆ ಗೋಳಿಕೈ, ಗಣಪತಿ ಹೆಗಡೆ ಹಿರೇಹದ್ದ, ಲಕ್ಷ್ಮಣ ಗೌಡ ಕುಳಿಕಟ್ಟು, ಚಂದ್ರಶೇಖರ ಗೌಡ ದಿಗೋಡಿ, ಮಂಜ ಹರಿಜನ ಹುಲ್ಲುಂಡೆ, ನೇತ್ರಾವತಿ ಭಟ್ಟ ಹೊಸ್ತೋಟ, ವಿಮಲಾ ನಾಯ್ಕ ಹೆಗ್ಗರಣಿ ಉಪಸ್ಥಿತರಿದ್ದರು.
ಎಂ.ಎಸ್.ಹೆಗಡೆ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಕ ಚಿದಂಬರ ಎಂ. ನಾಯ್ಕ ವಾರ್ಷಿಕ ವರದಿವಾಚಿಸಿದರು. ಸುಬ್ರಾಯ ಹೆಗಡೆ ವಂದಿಸಿದರು.