

ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು ಒಂದು ತಿಂಗಳ ಹಿಂದಷ್ಟೇ ಆರಂಭವಾಗಿರುವ ಪರಿಸರಕ್ಕಾಗಿ ನಾವು ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಶಾಸಕ, ಪರಿಸರಕ್ಕಾಗಿ ನಾವು ಸಂಘಟನೆ ಅಧ್ಯಕ್ಷ ಎ.ಟಿ ರಾಮಸ್ವಾಮಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಉಳಿಸುವ ನಿಟ್ಟಿನಲ್ಲಿ ಏಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ಸಂಘಟನೆ ಆರಂಭಿಸಲಾಗಿದೆ. ವಿಸ್ತರಿಸುವ ನಿಟ್ಟಿನಲ್ಲಿ ಕೃಷಿ ವಿವಿಯಲ್ಲಿ 2 ದಿನಗಳ ಕಾಲ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಅಲ್ಲಿ ಜೂ. 10ರೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ರಚನೆ ಸೇರಿ ಇತರ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು ಎಂದರು.
ದಿನದಿಂದ ದಿನಕ್ಕೆ ಪರಿಸರ ಸಂಪತ್ತು ನಾಶವಾಗುತ್ತಿದೆ. ಕರ್ನಾಟಕ ರಾಜ್ಯ ನಂಬರ್ ಒನ್ ಭ್ರಷ್ಟರ ರಾಜ್ಯವಾಗುತ್ತಿದೆ. ಕಾನೂನು ಪಾಲನೆ ಮಾಡಬೇಕಾದವರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪರಿಸರ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜ್ಯ ನಂಬರ್ ಒನ್ ಭ್ರಷ್ಟರ ರಾಜ್ಯವಾಗಿರುವುದು ನೋವಿನ ಸಂಗತಿ. ಭ್ರಷ್ಟರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಭೂ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ. ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಪರಿಸರ ನಾಶ, ಪ್ಲಾಸ್ಟಿಕ್ ಬಳಕೆಯಿಂದ ಅಲ್ಲೋಲ ಕಲ್ಲೋಲ ಆಗುತ್ತಿದೆ. ಮುಂದಿನ ಪೀಳಿಗೆಗೆ ಸ್ವಚ್ಛಂದ ಪರಿಸರ ಉಳಿಸಿ ಕೊಡುವ ಪ್ರಯತ್ನ ಮಾಡಬೇಕು. ಮಹಾದಾಯಿ ಕಳಸಾ ಬಂಡೂರಿ ವಿಷಯದಲ್ಲಿ ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ ಅವರು, ಎಲ್ಲದರಲ್ಲೂ ಕೊಳ್ಳೆ ಹೊಡೆಯುವುದು, ಅವರನ್ನು ರಕ್ಷಣೆ ಮಾಡುವುದರಲ್ಲೇ ಕಾಲ ಕಳೆಯುವುದು ಸರಿಯಲ್ಲ. ಏನಾದರೂ ಒಳ್ಳೆಯದನ್ನು ಮಾಡಲು ಈ ಸಂಘಟನೆ ಆರಂಭಿಸಿದ್ದೇವೆ ಎಂದರು.