

ಸಾಲಿಗ್ರಾಮ; ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಸಂಘಟನೆ ದೃಷ್ಟಿಯಿಂದ ಹೊಸದಾಗಿ ತಾಲೂಕು ಸಂಘ ಸ್ಥಾಪನೆಯಾಗಬೇಕು ಎಂದು ಸಮಾಜದ ಮುಖಂಡರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಸಾಲಿಗ್ರಾಮ ತಾಲೂಕು ಕೇಂದ್ರ ಎಂದು ಘೋಷಣೆ ಮಾಡಿದ ತಕ್ಷಣವೇ ಸಮುದಾಯದ ಜನರಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಜ್ಞೆ ಮೂಡಿಸಲು ಒಕ್ಕಲಿಗರ ಸಂಘವನ್ನು ಸ್ಥಾಪನೆ ಮಾಡಬೇಕಿತ್ತು. ತಡವಾಗಿಯಾದರೂ ಸಮುದಾಯದ ಯುವ ಮುಖಂಡರಲ್ಲಿ ಸಂಘಟನೆ ಬಗ್ಗೆ ಆಸಕ್ತಿ ಮೂಡಿರುವುದು ಸಂತಸ ತಂದಿದೆ ಎಂದು ಸಭೆಯಲ್ಲಿದ್ದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸ ತಾಲೂಕಿನ ಮೂರು ಹೋಬಳಿ ಕೇಂದ್ರದ ಬಹುತೇಕ ಗ್ರಾಮಗಳಲ್ಲಿ ಸಮುದಾಯ ಜನರು ವಾಸ ಮಾಡುತ್ತಿದ್ದು, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಮುದಾಯದ ಜನರಿಗೆ ಸಂಘದ ಮೂಲ ಉದ್ದೇಶದ ಬಗ್ಗೆ ಮಾಹಿತಿ ನೀಡುವ ಮೂಲಕ ಸದಸ್ಯತ್ವ ನೋಂದಣಿ ಮಾಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಒಕ್ಕಲಿಗ ಮುಖಂಡರಾದ ಸೋಮು, ಸಾ.ರಾ.ಸತೀಶ್, ಸಾ.ರಾ.ಪ್ರಸಾದ್, ಪಾಪಣ್ಣ, ಜ್ಯೋತಿ, ವೆಂಕಟೇಶ್, ಎಂ. ಮಾದೇವು, ತಿಮ್ಮೇಗೌಡ, ಮಹೇಂದ್ರ, ಎಸ್.ಆರ್.ನಾಗೇಶ್, ಎಸ್.ಆರ್.ಪ್ರಕಾಶ್, ಎಸ್.ಜೆ.ಮಹೇಶ್, ಡೈರಿ ಶ್ರೀನಿವಾಸ್, ಎಸ್.ಎ.ರವೀಶ್, ಗಿರೀಶ್, ಎಸ್.ಪಿ.ರಾಮು, ಮಹೇಶ್, ಮಂಜು, ಧರ್ಮಣ್ಣ, ವಿವೇಕ್ ಇತರರಿದ್ದರು.