ಜಿಲ್ಲೆಯಲ್ಲಿ ಎದೆಹಾಲಿನ ಬ್ಯಾಂಕ್: ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಸಭೆಯಲ್ಲಿ ನಿರ್ಣಯ

Decision to establish a breast milk bank Mandya
Published on

ಮಂಡ್ಯ: ತಾಯಿ ಹಾಲಿನ ಕೊರತೆಯುಳ್ಳ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ‘ಎದೆ ಹಾಲಿನ ಬ್ಯಾಂಕ್’ ಪ್ರಾರಂಭಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದ್ದಾರೆ.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಡಾ.ಜೆ.ಎಲ್.ಜವರೇಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಎದೆ ಹಾಲಿನ ಬ್ಯಾಂಕ್’ ಪ್ರಾರಂಭಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆದಿದೆ. ಅದರಂತೆ ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮಾದರಿಯಲ್ಲಿ ಎದೆ ಹಾಲಿನ ಬ್ಯಾಂಕ್ ತೆರೆಯಬಹುದಾಗಿದ್ದು, ಈ ಕುರಿತು ಡಿಎಚ್‌ಒ ಡಾ.ಕೆ.ಮೋಹನ್ ನೇತೃತ್ವದ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅದ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಲು ಸಿಇಒ ಸೂಚಿಸಿದರು.

ಪ್ರತಿಯೊಂದು ಶಿಶುವಿಗೂ ಬದುಕುವ ಹಕ್ಕಿದ್ದು, ಜಿಲ್ಲೆಯಲ್ಲಿ ಯಾವುದೇ ಶಿಶು ಮರಣ ಆಗದಂತೆ ತಡೆಗಟ್ಟುವ ಜವಾಬ್ದಾರಿ ಆರೋಗ್ಯ ಇಲಾಖೆಯದ್ದಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಗರ್ಭಾವಸ್ಥೆಯಿಂದಲೇ ಗುಣಮಟ್ಟದ ಆರೋಗ್ಯ ಸೇವೆ, ಸುರಕ್ಷಿತ ಹೆರಿಗೆಗೆ ಆಧ್ಯತೆ, ಶಿಶು ಆರೈಕೆ ಮತ್ತು ತುರ್ತು ಚಿಕಿತ್ಸೆ ಲಭ್ಯತೆ, ಮೊದಲ 6 ತಿಂಗಳು ತಾಯಿ ಹಾಲನ್ನು ಮಾತ್ರ ನೀಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಪೋಷಕಾಂಶಯುಕ್ತ ಆಹಾರ ಸೇವನೆ, ಲಸಿಕಾಕರಣ ಹಾಗೂ ಪಾಲಕರಿಗೆ ಶಿಶು ಆರೋಗ್ಯದ ಕುರಿತು ಜಾಗೃತಿ ನೀಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಶಿಶು ಮತ್ತು ತಾಯಿ ಇಬ್ಬರಿಗೂ ಗಂಭೀರ ತೊಂದರೆಗಳು ಉಂಟಾಗುವ ಸಂಭವವಿರುವ ಗರ್ಭಧಾರಣೆ ಮತ್ತು ಕಡಿಮೆ ತೊಂದರೆ ಇರುವ ಗರ್ಭಧಾರಣೆಗಳನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡುವಂತೆ ಹಾಗೂ ಯಾವುದೇ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಸುಲಭ ಎಂದರು.

ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ವಿತರಿಸಲಾಗುತ್ತಿದೆ. ಈ ಕಪ್ ಬಳಕೆಯ ಬಗ್ಗೆ ಅನುಸರಣೆಯ ಜವಬ್ದಾರಿಯನ್ನು ಆಶಾ ಕಾರ್ಯಕರ್ತೆಯರು ತೆಗೆದುಕೊಳ್ಳಬೇಕು. ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಕಾಲ ಕಾಲಕ್ಕೆ ಕುಡಿಯುವ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ. ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವ ಕಾರ್ಯವನ್ನು ಖಚಿತಪಡಿಸಿಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿಗಳು ಮಾಡಬೇಕು. ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ಶಿಶುವಿನ ಆರೋಗ್ಯದಲ್ಲಿನ ಸಮಸ್ಯೆಯನ್ನು ಮುಂಚಿತವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಶಿಶು ಮರಣ ಪ್ರಮಾಣವನ್ನು ತಡೆಗಟ್ಟಬಹುದಾಗಿದೆ. ಈ ಕುರಿತು ತೆಗೆದುಕೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಉದಾಸೀನತೆ ತೋರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಜೆ.ಸಿ.ಬೆಟ್ಟಸ್ವಾಮಿ, ಆರ್‌ಸಿಎಚ್ ಅಧಿಕಾರಿ ಡಾ.ಅಶ್ವಥ್, ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ.ಆಶಾಲತಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net