

ಮೈಸೂರು: ಕಾವೇರಿ ವಿಷಯದಲ್ಲಿ ಪದೇ ಪದೆ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಗಮನಿಸಿ ಕಾವೇರಿ ತಜ್ಞರ ಸತ್ಯಶೋಧನ ಸಮಿತಿ ರಚಿಸಲು ಮೈಸೂರು ಕಾವೇರಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದಿಂದ ತಮಿಳುನಾಡಿಗೆ ನೀರು ಬಿಡುವಂತೆ ಮೇಲಿಂದ ಮೇಲೆ ಹೇಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ವಾಸ್ತವವಾಗಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಏಕೆ ಅನ್ಯಾಯವಾಗುತ್ತಿದೆ ಎಂಬುದನ್ನು ತಿಳಿಯಲು ಕಾವೇರಿ ತಜ್ಞರ ಸತ್ಯಶೋಧನ ಸಮಿತಿ ರಚಿಸಲು ಸಮಿತಿ ನಿರ್ಧರಿಸಿದೆ.
ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ಅನ್ಯಾಯಕ್ಕೊಳಗಾಗಲು ಕಾರಣ ಏನು ಎಂಬುದನ್ನು ನಾವೆಲ್ಲರೂ ತಿಳಿಯಬೇಕಾಗಿದೆ. ಇದಕ್ಕಾಗಿ ಕಾವೇರಿ ತಜ್ಞರ ಸತ್ಯಶೋಧನ ಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರವೂ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಬಿಳಿಗುಂಡ್ಲು ಜಲಾಶಯದಲ್ಲಿ ಇರುವ ಜಲಮಾಪಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಕರ್ನಾಟಕದಿಂದ ತಮಿಳುನಾಡಿಗೆ 50 ಟಿಎಂಸಿಗೂ ಹೆಚ್ಚು ನೀರು ಹರಿದು ಹೋಗುತ್ತಿದೆ. ಇದನ್ನು ಗಮನಿಸಿಲು ರಾಜ್ಯ ಸರ್ಕಾರದಿಂದ ಒಬ್ಬರನ್ನು ನೇಮಿಸಬೇಕು. ಹಾಗೆಯೇ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹರಿಯುವ ಎರಡು ಗಂಟೆಗಳ ಲೆಕ್ಕಾಚಾರದಲ್ಲಿ 24 ಗಂಟೆಗಳಲ್ಲಿ ನೀರು ಹರಿದು ಹೋಗಿರುವ ಲೆಕ್ಕಾಚಾರ ಮಾಡಲಾಗುತ್ತಿದೆ. ಬೇರೆ ಸಮಯದಲ್ಲಿ ಹೆಚ್ಚುವರಿ ನೀರು ಹೋದರೆ ಅದನ್ನು ಲೆಕ್ಕ ಹಾಕುತ್ತಿಲ್ಲ. ಆದ್ದರಿಂದ ಜಲ ಮಾಪನ ಕಾರ್ಯ ಕರ್ನಾಟಕದ ಉಸ್ತುವಾರಿಯಲ್ಲಿ ನಡೆಯುವಂತೆ ಮಾಡಬೇಕು ಎಂದು ಕೇಂದ್ರ ಜಲ ಸಂಪನ್ಮೂಲ ಇಲಾಖೆಯನ್ನು ಅವರು ಅಗ್ರಹಿಸಿದರು.
ಕಾವೇರಿ ತೀರ್ಪಿನ ಪ್ರಕಾರ ಕರ್ನಾಟಕ 18 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಪಡಿಸಿಕೊಳ್ಳಬಹುದಾಗಿದೆ. ಈಗ ರಾಜ್ಯದ ಅಚ್ಚುಕಟ್ಟು ಪ್ರದೇಶ 13 ಲಕ್ಷ ಎಕರೆ ಮಾತ್ರವಿದೆ. 5 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಪಡಿಸಿಕೊಂಡರೆ ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ನಾವು ಬಳಸಿಕೊಳ್ಳಬಹುದು. ನಮ್ಮ ಜಲಾಶಯದಲ್ಲಿರುವ ನೀರು ಬಿಡಿ ಎಂದು ತಮಿಳುನಾಡು ನ್ಯಾಯಾಲಯದ ಮೊರೆ ಹೋಗುವುದು ತಪ್ಪುತ್ತದೆ ಎಂಬ ಸಭೆಯ ತೀರ್ಮಾನವನ್ನು ಸರ್ಕಾರದ ಗಮನಕ್ಕೆ ತರೋಣ ಎಂದು ತಿಳಿಸಿದರು.
ಪರಿಸರಕ್ಕೆ ಹಾನಿ ಉಂಟು ಮಾಡುವ ಮತ್ತು 15 ಸಾವಿರ ಕೋಟಿ ರೂ. ದುಂದು ವೆಚ್ಚದ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವ ಮಾತು ಆಡಿಕೊಂಡು ಸರ್ಕಾರ ಕಾಲಹರಣ ಮಾಡದೆ ನಮ್ಮ ಅಚ್ಚುಕಟ್ಟು ನಾಲೆಗಳನ್ನೂ ಅಭಿವೃದ್ಧಿಪಡಿಸಿ, ಹೆಚ್ಚುವರಿ ನೀರು ಸಂಗ್ರಹಣೆಗೆ ಯತ್ನಿಸಬೇಕು. ಬಿಳಿಗುಂಡ್ಲು ಬಳಿಯ ಜಲಮಾಪನವನ್ನು ಬಂಡೀಪುರ ಗಡಿಯ ಗುಂಡ್ಲು ಜಲಾಶಯದಲ್ಲಿ ನಿರ್ಮಿಸಿದರೆ ಕನಿಷ್ಠ 30 ಟಿಎಂಸಿ ನೀರನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಗೌರವ ಕಾರ್ಯದರ್ಶಿ ಮೆಲ್ಲಹಳ್ಳಿ ಮಹಾದೇವಸ್ವಾಮಿ, ರಾಜ್ಯ ರೈತ ಸಂಘದ ಬೆಳಗೊಳ ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತ ಪ್ರಕಾಶ್‌ಬಾಬು, ಮೈಸೂರು ಶರಣ ಮಂಡಳಿ ಉಪಾಧ್ಯಕ್ಷ ಮಹಾದೇವಸ್ವಾಮಿ, ಕಾವೇರಿ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷ ಎಂ.ಜೆ. ಸುರೇಶ್‌ಗೌಡ, ಹಿರಿಯ ಕನ್ನಡ ಹೋರಾಟಗಾರ ಬೋಗಾದಿ ಸಿದ್ದೇಗೌಡ, ರಾಜ್ಯ ರೈತ ಸಂಘದ ಸಿಂಧುವಳ್ಳಿ ಶಿವಕುಮಾರ್, ಕನ್ನಡ ಹೋರಾಟಗಾರ ತೇಜಸ್ ಲೋಕೇಶ್‌ಗೌಡ, ಮುಖಂಡರಾದ ಕೃಷ್ಣಪ್ಪ, ಹನುಮಂತಗೌಡ, ಕನ್ನಡ ಚಲನಚಿತ್ರ ನಿರ್ದೇಶಕರ ರಾಮ್ ಜನಾರ್ದನ್, ಕನ್ನಡ ಸರ್ವೋದಯ ಪಕ್ಷದ ಕಾರ್ಯದರ್ಶಿ ಶಿವನಾಯಕರ್, ಕಾವೇರಿ ಕ್ರಿಯಾ ಸಮಿತಿಯ ಭಾಗ್ಯಮ್ಮ ,ಆಟೋ ಮಹದೇವ್, ಚಂದ್ರು, ಮಹೇಶ್, ಪಡುವಾರಹಳ್ಳಿ ಶ್ರೀನಿವಾಸ್, ಹರ್ಷ ದಿನೇಶ್, ಮಂಜು, ವಿಷ್ಣು, ಶ್ರೀನಿವಾಸ್, ಕೃಷ್ಣ, ಕಬ್ಬು ಬೆಳೆಗಾರರ ಸಂಘದ ಎನ್ .ನಾಗೇಶ್ ಇತರರು ಭಾಗವಹಿಸಿದ್ದರು.