

ಕಾರ್ಕಳ: ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡದಿರುವುದು ಮತ್ತು 9 ಹೊಸ ವಿವಿಗಳಿಗೆ ಯಾವುದೇ ಅನುದಾನ ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ. ಬಹುಪಾಲು ವಿವಿಗಳು ಸಾಮಾಜಿಕ ಹಾಗೂ ಶೆಕ್ಷಣಿಕವಾಗಿ ಹಿಂದುಳಿದ ಮತ್ತು ಶೋಷಿತ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸ್ಥಾಪಿತವಾಗಿದ್ದು, ಸರ್ಕಾರದ ನಿರ್ಧಾರದಿಂದ ಅವರೆಲ್ಲ ಶಿಕ್ಷಣದಿಂದ, ಸಂಶೋಧನಾ ಅಧ್ಯಯನ ಹಾಗೂ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ.
ರಾಜ್ಯ ಸರ್ಕಾರದ ಏಕಾಏಕಿ ನಿರ್ಧಾರ ಶೈಕ್ಷಣಿಕ ವ್ಯವಸ್ಥೆ ದುರ್ಬಲಗೊಳಿಸಲಿದೆ. ಜಿಲ್ಲಾವಾರು ಯೂನಿವರ್ಸಿಟಿ ಸ್ಥಾಪನೆಯಿಂದ ಆರ್ಥಿಕ ಒತ್ತಡವಿಲ್ಲದೆ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮ್ಮ ಸಂಶೋಧನೆ ಹಾಗೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಮಾಡಿಕೊಡಲಾಗಿತ್ತು. ಇಂತಹ ಯುನಿವರ್ಸಿಟಿ ಮುಚ್ಚಲು ಹೊರಟಿರುವುದು ಖೇದಕರ. ಶಿಕ್ಷಣದ ಮೇಲಿನ ಖರ್ಚು ಮುಂದಿನ ಮಾನವ ಸಂಪನ್ಮೂಲ ನಿರ್ಮಿಸುವ ಬಂಡವಾಳವಾಗಿರುತ್ತದೆ. ಶಿಕ್ಷಣದ ಮೇಲೆ ಹೂಡಿಕೆ ಮಾಡುವುದರಿಂದ ರಾಜ್ಯ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿಯೂ ಬಲಗೊಳ್ಳಲಿದೆ. ಸರ್ಕಾರ ಅನುದಾನ ಘೋಷಿಸದೆ ತೋರುತ್ತಿರುವ ಈ ಧೋರಣೆಯಿಂದ ಹಿಂದಡಿ ಇಡದಿದ್ದರೆ ನಮ್ಮ ರಾಜ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದ್ದು, ಶಿಕ್ಷಣ ಕಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕರ ಸಂಘ ಉಡುಪಿ ಅಧ್ಯಕ್ಷ ಪ್ರೊ.ಡಾ.ಸುರೇಂದ್ರ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಡಾ.ರಾಧಾಕೃಷ್ಣ ಹಾಗೂ ಡಾ.ಭೈರವಿ ಜಂಟಿ ಹೇಳಿಕೆ ನೀಡಿದ್ದಾರೆ.