

ಹುಣಸೂರು: ಈ ಬಾರಿಯ ಸ್ವಾತಂತ್ರೃ ದಿನವನ್ನು ದೇಶಭಕ್ತಿ, ರಾಷ್ಟ್ರ ಪ್ರೇಮದೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.
ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಸ್ವಾತಂತ್ರೃ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಯಿತು. ಎಲ್ಲ ಇಲಾಖೆಗಳ ಸಹಯೋಗದಲ್ಲಿ ಅಚ್ಚುಕಟ್ಟಾಗಿ ಮತ್ತು ಶಿಸ್ತುಬದ್ಧವಾಗಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆಸಲು ತೀರ್ಮಾನಿಸಲಾಯಿತು.
ಶಿಷ್ಟಾಚಾರ ಪಾಲಿಸಲಿ: ಈ ವೇಳೆ ಮಾತನಾಡಿದ ಮುಖಂಡ ಪುಟ್ಟರಾಜು, ಡಿ.ಕುಮಾರ್, ಚಿಕ್ಕಸ್ವಾಮಿ, ಸ್ವಾತಂತ್ರ್ಯದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ವೇದಿಕೆಯಲ್ಲಿ ಧ್ವಜಾರೋಹಣ ಕಾರ್ಯ ನೆರವೇರಿಸುವ ಉಪ ವಿಭಾಗಾಧಿಕಾರಿ ಮತ್ತು ತಾಲೂಕಿನ ಶಾಸಕರು ಧ್ವಜವಂದನೆ ಸ್ವೀಕರಿಸುವುದು ಶಿಷ್ಟಾಚಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವೇದಿಕೆಯನ್ನೇರುತ್ತಿರುವುದು ಅಭಾಸಕ್ಕೆ ಎಡೆಯುಂಟು ಮಾಡುತ್ತಿದೆ. ಇದನ್ನು ತಡೆಯಬೇಕೆಂದು ಒತ್ತಾಯಿಸಿದಾಗ, ತಹಸೀಲ್ದಾರ್ ಜೆ.ಮಂಜುನಾಥ್ ಶಿಷ್ಟಾಚಾರದಂತೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ವೇದಿಕೆಯಲ್ಲಿ ಎಲ್ಲ ಗಣ್ಯರಿಗೂ ಸ್ಥಾನ ಕಲ್ಪಿಸಲಾಗುವುದೆಂದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮದಲ್ಲಿ ನಗರವ್ಯಾಪ್ತಿಯ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಪಥಸಂಚಲನ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗುವುದು, ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ವೇಳೆ ಅಭಾಸವಾಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರಿಗೆ ಸೂಕ್ತ ಸ್ಥಳಾವಕಾಶ ನೀಡಿ ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಕೊಡಲಾಗುವುದು. ವಿದ್ಯಾರ್ಥಿಗಳಿಂದ ಅಂದು ಸಂಜೆ ಕೂಡ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಸಾಧನೆಗೈದ ತಾಲೂಕಿನ ಸಾಧಕರಿಗೆ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವ್ಯಾಸಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಜವಾಬ್ದಾರಿಗಳ ಹಂಚಿಕೆ: ಇದೇ ವೇಳೆ ವಿವಿಧ ಕಾರ್ಯಕ್ರಮ ಯಶಸ್ಸಿಗೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ತಹಸೀಲ್ದಾರ್ ಜೆ.ಮಂಜುನಾಥ್ ಹಂಚಿದರು. ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯು ವೇದಿಕೆ ಸಜ್ಜು, ಅಲಂಕಾರ, ಮತ್ತು ಬ್ಯಾರಿಕೇಡ್‌ಗಳ ಅಳವಡಿಕೆಯನ್ನು ಕೈಗೊಳ್ಳಬೇಕು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳು ಮತ್ತು ಗಣ್ಯರಿಗೆ ಲಘು ಉಪಾಹಾರ ಮತ್ತು ಟೀ, ಕಾಫಿ ಪೂರೈಸಬೇಕು. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ಗಣ್ಯರ ಮತ್ತು ಸಾಧಕರ ಸನ್ಮಾನಕ್ಕೆ ಅಗತ್ಯ ಹೂಗುಚ್ಛ ಮುಂತಾದವುಗಳನ್ನು ಒದಗಿಸುವುದು. ಮುಖಂಡ ವಕೀಲ ಪುಟ್ಟರಾಜು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು.
ನಗರಸಭಾದ್ಯಕ್ಷ ಗಣೇಶ್ ಕುಮಾರಸ್ವಾಮಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ಸುಬ್ಬಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ, ಮುಖಂಡರಾದ ನಿಂಗರಾಜ ಮಲ್ಲಾಡಿ, ವಿ.ಪಿ.ಸಾಯಿನಾಥ್, ಇಒ ಕೆ.ಹೊಂಗಯ್ಯ, ಬಿಇಒ ಎಸ್.ಪಿ.ಮಹದೇವ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಗೈರಾದವರಿಗೆ ಶೋಕಾಸ್ ನೋಟಿಸ್ : ರಾಷ್ಟ್ರೀಯ ಹಬ್ಬಗಳ ಆಚರಣೆ ಕುರಿತಾದ ಪೂರ್ವಭಾವಿ ಸಭೆ ಮತ್ತು ಆಚರಣಾ ದಿನಗಳಂದು ಸಾಕಷ್ಟು ಅಧಿಕಾರಿಗಳು ಗೈರಾಗುತ್ತಿರುವುದು ರಾಷ್ಟ್ರಕ್ಕೆ ಮಾಡಿರುವ ಅಪಮಾನವಾಗಿದೆ. ಈ ಕುರಿತು ತಹಸೀಲ್ದಾರ್ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದಾಗ ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು. ಇದೆಲ್ಲವನ್ನೂ ಪದೇ ಪದೆ ಹೇಳಲು ಆಗುವುದಿಲ್ಲ. ಇಂದು ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.