

ಮೈಸೂರು: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಮೈಸೂರು ವೃತ್ತದ ಒಟ್ಟು 14 ಆಸ್ತಿಗಳನ್ನು ಹರಾಜು ಹಾಕಲಾಗುವುದು ಎಂದು ಬಿಎಸ್‌ಎನ್‌ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಉಜ್ವಲ್ ಗುಲ್ಹಾನೆ ಹೇಳಿದರು.
ಮೊದಲ ಹಂತದಲ್ಲಿ 7 ಆಸ್ತಿಗಳನ್ನು ಹರಾಜು ಹಾಕಲಾಗುವುದು. ವರ್ಷಾಂತ್ಯದೊಳಗೆ ಉಳಿದ 7 ಆಸ್ತಿಗಳನ್ನು ಹರಾಜು ಹಾಕಲಾಗು ವುದು. ಸಂಸ್ಥೆಗೆ ಅನುಪಯುಕ್ತವಾಗಿರುವ ಆಸ್ತಿಗಳನ್ನು ಗುರುತಿಸಿ ಹರಾಜು ಹಾಕಲಾಗುತ್ತಿದೆ. 4ಜಿ ನೆಟ್‌ವರ್ಕ್ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಸರ್ಕಾರದಿಂದ ಪ್ರತ್ಯೇಕ ನಿಧಿ ದೊರೆಯದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನ ಪ್ರಕಾರ ಆಸ್ತಿಗಳ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುವೆಂಪುನಗರ ಸಿ ಮತ್ತು ಡಿ ಬ್ಲಾಕ್ ಬಡಾವಣೆಯ ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ 25,785 ಚದರ ಅಡಿ ವಿಸ್ತೀರ್ಣದ ಒಟ್ಟು 21.11 ಕೋಟಿ ರೂ. ಮೌಲ್ಯದ ಆಸ್ತಿ ಹರಾಜಿಗೆ ಸಂಬಂಧಿಸಿದಂತೆ ಆಸಕ್ತರು ಜುಲೈ 1 ರೊಳಗೆ ಬಿಡ್ ಸಲ್ಲಿಸಬಹುದು. ಮಾಹಿತಿಗೆ ttps://assetmonetization.bsnl.co.in ವೀಕ್ಷಿಸಬಹುದು. ಕುವೆಂಪುನಗರದ ಆಸ್ತಿ ಹರಾಜು ಪ್ರಕ್ರಿಯೆ ನಂತರ ನಗರದ ಜೆಎಸ್‌ಎಸ್ ಬಡಾವಣೆಯ ರಾಜ್‌ಕುಮಾರ್ ಮುಖ್ಯ ರಸ್ತೆಯಲ್ಲಿರುವ ದೂರವಾಣಿ ವಿನಿಮಯ ಕೇಂದ್ರ, ದಟ್ಟಗಳ್ಳಿ 3ನೇ ಹಂತ ಕನಕದಾಸನಗರ ಬಿ ಬ್ಲಾಕ್‌ನ ದೂರವಾಣಿ ವಿನಿಮಯ ಕೇಂದ್ರ, ಬೆಳವಾಡಿ ಹೂಟಗಳ್ಳಿ ಕೈಗಾರಿಕಾ ಪ್ರದೇಶದ ದೂರವಾಣಿ ವಿನಿಮಯ ಕೇಂದ್ರ, ಬನ್ನಿಮಂಟಪ ದೂರವಾಣಿ ವಿನಿಮಯ ಕೇಂದ್ರ, ಚಾಮುಂಡಿಬೆಟ್ಟ ರಾಜೇಂದ್ರ ವಿಲಾಸ್ ಅರಮನೆ ರಸ್ತೆಯ ಮೈಕ್ರೋವೇವ್ ಸ್ಟೇಷನ್ ಮತ್ತು ಮಡಿಕೇರಿಯ ಮೈಕ್ರೋವೇವ್ ಸ್ಟೇಷನ್‌ಅನ್ನು ಹರಾಜು ಹಾಕಲಾಗುವುದು ಎಂದರು.
4ಜಿ ನೆಟ್‌ವರ್ಕ್: ಬಿಎಸ್‌ಎನ್‌ಎಲ್ ಸ್ಟಾೃಂಡ್ ಅಲೋನ್ ಮೇಕ್ ಇನ್ ಇಂಡಿಯಾ 4ಜಿ ನೆಟ್‌ವರ್ಕ್‌ಅನ್ನು ಹೊರ ತರಲಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ಮೂಲಕ 4ಜಿ ನೆಟ್‌ವರ್ಕ್ ಸ್ಥಾಪಿಸಲಾಗುವುದು. ನಂತರದ ದಿನಗಳಲ್ಲಿ ಅದೇ ನೆಟ್‌ವರ್ಕ್ ಅನ್ನು 5ಜಿಗೆ ಅಪ್‌ಗ್ರೇಡ್ ಮಾಡಲಾಗುವುದು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 337, ಕೊಡಗು ಜಿಲ್ಲೆಯಲ್ಲಿ 200, ಮಂಡ್ಯದಲ್ಲಿ 153 ಸೇರಿದಂತೆ ಒಟ್ಟು 690 ಟವರ್‌ಗಳು 4 ಜಿ ಸೇವೆ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯ ಬಿಎಸ್‌ಎನ್‌ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಪರಮೇಶ್ವರಿ ದಯಾಳ್, ಪ್ರಧಾನ ವ್ಯವಸ್ಥಾಪಕ ದೀಪಕ್ ಕುಮಾರ್ ಶರ್ಮ ಇದ್ದರು.