ಮಹಿಳಾ ನಗರ ಸಮಿತಿಗಳ ರಚನೆಗೆ ನಿರ್ಧಾರ

nrp meeting
ಎನ್.ಆರ್.ಪುರದಲ್ಲಿ ವನವಾಸಿ ಕಲ್ಯಾಣದ ಜಿಲ್ಲಾಧ್ಯಕ್ಷ ಕೆ.ವಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಯರಾಂ, ವೇದಾವತಿ ಇತರರಿದ್ದರು.
Published on

ಎನ್.ಆರ್.ಪುರ: ವನವಾಸಿ, ಗ್ರಾಮ ವಾಸಿ, ನಗರ ವಾಸಿ ಹಾಗೂ ನಾವೆಲ್ಲರೂ ಭಾರತ ವಾಸಿಗಳು ಎಂಬ ಘೋಷಣೆಯೊಂದಿಗೆ ವನವಾಸಿ ಕಲ್ಯಾಣಕ್ಕಾಗಿ ಶ್ರಮಸುತ್ತಿದ್ದೇವೆ ಎಂದು ವನವಾಸಿ ಕಲ್ಯಾಣದ ಜಿಲ್ಲಾಧ್ಯಕ್ಷ ಕೆ.ವಿ.ಚಂದ್ರಶೇಖರ್ ತಿಳಿಸಿದರು.

ಅಗ್ರಹಾರದಲ್ಲಿ ವನವಾಸಿ ಕಲ್ಯಾಣದ ನೇತೃತ್ವದಲ್ಲಿ ಮಹಿಳಾ ನಗರ ಸಮಿತಿಗಳ ರಚನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶದ ಎಲ್ಲ ವನವಾಸಿಗಳನ್ನು ಸಂಘಟಿಸುವ ದೃಷ್ಟಿಯಿಂದ ಸೆಪ್ಟೆಂಬರ್‌ನಲ್ಲಿ ಹರಿಯಾಣದಲ್ಲಿ ರಾಷ್ಟ್ರ ಮಟ್ಟದ ವನವಾಸಿ ಕಲ್ಯಾಣದ ಸಮ್ಮೇಳನ ನಡೆಸಲಾಗಿತ್ತು. ಎನ್.ಆರ್.ಪುರದಲ್ಲಿ ಮಹಿಳಾ ನಗರ ಸಮಿತಿ ಹುಟ್ಟು ಹಾಕಲಾಗುವುದು ಎಂದರು.
ವನವಾಸಿ ಕಲ್ಯಾಣದ ಜಿಲ್ಲಾ ಕಾರ್ಯದರ್ಶಿ ಜಯರಾಂ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಪಂಗಡಗಳಿವೆ. ಗೌಡಲು, ಹಸಲರು, ಮೇದರು, ಮರಾಠಿ ನಾಯಕರು, ಮಲೆ ಕುಡಿಯ, ವಾಲ್ಮೀಕಿ, ಡೊಂಗ್ರಿ ಗರೆಸಿಯ ಎಂಬ ಪಂಗಡಗಳಿದ್ದು ಎಲ್ಲರನ್ನೂ ಸಂಘಟಿಸುತ್ತಿದ್ದೇವೆ. 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ವನವಾಸಿ ಕಲ್ಯಾಣ ಸಂಘಟನೆ ಹುಟ್ಟು ಹಾಕಲಾಯಿತು. 2019ರಲ್ಲಿ ಎನ್.ಆರ್.ಪುರದಲ್ಲಿ ಹಾಗೂ 2022ರಲ್ಲಿ ಜಯಪುರದಲ್ಲಿ ವನವಾಸಿ ಕಲ್ಯಾಣ ಸಮ್ಮೇಳನ ನಡೆಸಲಾಗಿದೆ. ಹಿಂದೆ ಜಿಲ್ಲೆಯಲ್ಲಿ 15 ಮನೆಪಾಠ ಕೇಂದ್ರವಿತ್ತು. ಸಂಸ್ಕಾರ ಕೇಂದ್ರ ಇತ್ತು. ಕರೊನಾ ಬಂದನಂತರ ಸ್ಥಗಿತವಾಯಿತು. ಪುನರಾರಂಭಿಸಲಾಗುವುದು ಎಂದರು.
ಪ್ರಾಂತ ನಗರಿಯ ಮಹಿಳಾ ಪ್ರಮುಖ್ ವೇದಾವತಿ ಮಾತನಾಡಿ, ನಗರ ಸಮಿತಿಯಲ್ಲಿ ಎಲ್ಲ ಸಮುದಾಯದವರನ್ನೊಳಗೊಂಡ ಸದಸ್ಯರಿರಬೇಕು. ಸಮಿತಿಯವರು ವನವಾಸಿಗಳಿಗೆ ಸಂಸ್ಕಾರ, ಸಂಸ್ಕೃತಿ, ಸಲಹೆ, ಸಹಕಾರ ನೀಡಬೇಕು. ನಗರ ಸಮಿತಿಯವರು ರಾಣಿ ದುರ್ಗಾವತಿ ಜಯಂತಿಯನ್ನು ನ.17ರಂದು ಆಚರಣೆಗೆ ಸಿದ್ಧತೆಮಾಡಿಕೊಳ್ಳಬೇಕು ಎಂದು ತಿಳಿಸಿದರು.
15 ಮಹಿಳೆಯರನ್ನೊಳಗೊಂಡ ನಗರ ಸಮಿತಿ ರಚಿಸಲಾಯಿತು. ಮುಂದಿನ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net