

ಬೃಹತ್ ಮೈಸೂರು ಮಹಾನಗರ ಪಾಲಿಕೆ (ಗ್ರೇಟರ್ ಮೈಸೂರು) ರಚನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರೇಟರ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ದೇವರಾಜ ಮಾರುಕಟ್ಟೆ ವಿಚಾರದಲ್ಲಿ ನ್ಯಾಯಾಲಯ, ತಜ್ಞರ ಸಮಿತಿಯು ಪುನರ್ ನಿರ್ಮಾಣಕ್ಕೆ ಸಮ್ಮತಿ ನೀಡಿರುವ ಕಾರಣ ಸಾಧ್ಯವಾದಷ್ಟು ಬೇಗನೇ ತೀರ್ಮಾನ ಮಾಡಲಿದ್ದೇವೆ. ಕಟ್ಟಡ ಶಿಥಿಲಗೊಂಡು ಪ್ರಾಣಾಹಾನಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ವ್ಯಾಪಾರಿಗಳೊಂದಿಗೆ ಚರ್ಚಿಸಿ ತೆರವು ಮಾಡಿಸಲಾಗುವುದು. ನಮಗೆ ಜನರ ಪ್ರಾಣ ಮುಖ್ಯ. ಈ ವಿಚಾರದಲ್ಲಿ ವಿಳಂಬ ಮಾಡುವುದಿಲ್ಲ ಎಂದರು.
ಮೈಸೂರು ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೇಕಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲೆಗೆ ಅಗತ್ಯವಿರುವ ಯೋಜನೆಗಳ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸಿಎಂ ಅವರು ಮೈಸೂರಿನವರೇ ಆಗಿರುವ ಕಾರಣ ಹೆಚ್ಚಿನ ನಿರೀಕ್ಷೆಗಳು ಇವೆ ಎಂದರು.