

ಕುಮಟಾ: ಅಧ್ಯಾತ್ಮದ ಆನಂದವನ್ನು ನೀಡುವವರೇ ಗುರುಗಳು, ಸನ್ಯಾಸಿಗಳು. ಚಾತುರ್ಮಾಸ ಎಂದರೆ ಸಾಕ್ಷಾತ್ ಭಗವಂತನೇ ಭೂಮಿಗೆ ಬರುವಂಥ ಸನ್ನಿವೇಶ. ಚಾತುರ್ಮಾಸು ನಡೆಯುವಲ್ಲಿ ದುರ್ಭಿಕ್ಷವಿಲ್ಲ ಎಂದು ಕನ್ಯಾಡಿಯ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಕರ್ನಾಟಕದಿಂದ ಮಹಾಮಂಡಲಾಧೀಶ್ವರರಾಗಿ ಪಟ್ಟಾಭಿಷಿಕ್ತರಾಗಿದ್ದರಿಂದ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಭಾನುವಾರ ಸಮಾಜಬಾಂಧವರಿಂದ ಗುರುನಮನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮಹಾಮಂಡಲೇಶ್ವರ ಪದವಿ ಪಡೆದ ಮಹಾಕುಂಭಮೇಳದ ಸಂದರ್ಭದಲ್ಲಿ ನಿರಂತರ ಅಧ್ಯಾತ್ಮ ಸಾಧನೆಯಲ್ಲಿ ಸುಮಾರು 2 ತಿಂಗಳ ಕಾಲ ನಿದ್ರಾಹೀನತೆ, ಅನಾರೋಗ್ಯ ಎದುರಿಸಲು ಸಾಧ್ಯವಾಗಿದೆ. ಈ ಬಾರಿ ಕೋನಳ್ಳಿಯಲ್ಲಿ ಚಾತುರ್ಮಾಸವನ್ನು ನಡೆಸಲು ಭಕ್ತರು ತೀರ್ಮಾನಿಸಿದ್ದು ಭಗವಂತನ ಸಂಕಲ್ಪವೇ ಆಗಿದೆ. ಚಾತುರ್ಮಾಸ ನಡೆಯುವ ಕ್ಷೇತ್ರದಲ್ಲಿ ದುರ್ಭಿಕ್ಷ ಬರುವುದಿಲ್ಲ. ಅನಾರೋಗ್ಯ ಕಡಿಮೆಯಾಗಿ ಧನಾತ್ಮಕತೆ ಪಸರಿಸುತ್ತದೆ ಎಂಬ ಕಾರಣಕ್ಕೆ ಚಾತುರ್ಮಾಸ ಆಚರಣೆಗೆ ವಿಶೇಷ ಮಹತ್ವ ಇದೆ ಎಂದು ಹಿಂದಿನ ಋಷಿಮುನಿಗಳೇ ನಿರ್ಧರಿಸಿದ್ದಾರೆ. ಪಾಂಡವರ ಕಥೆ ಶುರುವಾಗುವುದೇ ಋಷಿ ದೂರ್ವಾಸರ ಚಾತುರ್ಮಾಸದಿಂದ. ಆದ್ದರಿಂದ ಇಂದಿನ ಕಾಲಕ್ಕೆ ಚಾತುರ್ಮಾಸದ ಮಹತ್ವವನ್ನು ಯಕ್ಷಗಾನ ನಾಟಕದಂತಹ ಪರಿಣಾಮಕಾರಿ ಮಾಧ್ಯಮಗಳ ಮೂಲಕ ತೋರ್ಪಡಿಸಬೇಕು. ರಾಮಾಯಣ, ಮಹಾಭಾರತದಂತಹ ಕಥಾನಕಗಳ ಪಾತ್ರಗಳ ಸತ್ವವನ್ನು ಪ್ರಚುರಪಡಿಸಬೇಕು. ಚಾತುರ್ಮಾಸ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಶ್ರೀರಾಮಕ್ಷೇತ್ರ ಸೇವಾ ಸಮಿತಿ ಸಂಚಾಲಕ ಆರ್.ಜಿ. ನಾಯ್ಕ, ಪೀಠಾಧೀಶರಾದ ಹದಿನೈದು ವರ್ಷಗಳಲ್ಲಿ ಬ್ರಹ್ಮಾನಂದ ಶ್ರೀಗಳು ಉತ್ತರ ಪ್ರದೇಶದಲ್ಲಿ ಮಠ ಸ್ಥಾಪಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಭಾರತದ ಸ್ವಾಮೀಜಿಯೊಬ್ಬರು ಉತ್ತರ ಭಾರತದಲ್ಲಿ ಮಠ ಸ್ಥಾಪಿಸಿರುವುದು ಮತ್ತು ಮಹಾಮಂಡಲೇಶ್ವರರಾಗಿ ಕೀರ್ತಿಪದವಿ ಪಡೆದಿರುವುದು ಸಣ್ಣ ವಿಚಾರವಲ್ಲ. ಶ್ರೀಗಳು ಶೈಕ್ಷಣಿಕ, ಆಧ್ಯಾತ್ಮಿಕ ಆಲೋಚನೆಗಳ ಮೂಲಕ ಎಲ್ಲಡೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಶಾಸಕ ದಿನಕರ ಶೆಟ್ಟಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು. ಉದ್ಯಮಿ ಮುರಳೀಧರ ಪ್ರಭು, ನಾಮಧಾರಿ ಸಮಾಜ ಪ್ರಮುಖರಾದ ಎಚ್.ಆರ್. ನಾಯ್ಕ, ಸೂರಜ ನಾಯ್ಕ, ರತ್ನಾಕರ ನಾಯ್ಕ, ಸತೀಶ ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಂತೋಷ ನಾಯ್ಕ, ವೈಭವ ನಾಯ್ಕ, ಸಂಘದ ನಿರ್ದೇಶಕರಾದ ಕಮಲಾಕರ ನಾಯ್ಕ, ಗಜಾನನ ನಾಯ್ಕ, ಸುರೇಶ ನಾಯ್ಕ ಇತರರು ಇದ್ದರು.