ಉಪ ಕದನದಲ್ಲಿ ದಿಗ್ಗಜರ ರಾಜಕೀಯ ಯಾನ ನಿರ್ಧಾರ

Channapatna-toys-ChirodeepChaudhuri-GoogleApp
Published on

ರಾಜಕಾರಣಿಗಳ ಪ್ರತಿಷ್ಠೆಯ ವೇದಿಕೆಯಾದ ಚನ್ನಪಟ್ಟಣ ದಿಗ್ಗಜರ ನಾಳೆಯ ದಿಕ್ಸೂಚಿ ಸಿಪಿವೈ ರಾಜಕೀಯ ಭವಿಷ್ಯ ನಿರ್ಧಾರ

ಅಭಿಲಾಷ್ ತಿಟ್ಟಮಾರನಹಳ್ಳಿ

ಚನ್ನಪಟ್ಟಣ

ಘಟಾನುಘಟಿ ರಾಜಕಾರಣಿಗಳ ಪ್ರತಿಷ್ಠೆಯ ವೇದಿಕೆಯಾದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ದಿನಕಳೆದಂತೆ ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ. ಮೈತ್ರಿ ಹಾಗೂ ಕೈ ಹುರಿಯಾಳುಗಳು ಯಾರು ಎಂಬುದು ಇನ್ನೂ ಅಂತಿಮವಾಗದಿದ್ದರೂ, ಈ ಚುನಾವಣೆ ಮೂವರು (ತ್ರಿಮೂರ್ತಿ) ರಾಜಕೀಯ ದಿಗ್ಗಜರ ಭವಿಷ್ಯದ ದಿಕ್ಸೂಚಿ ಎಂಬ ಚರ್ಚೆ ಆರಂಭಗೊಂಡಿದೆ.

ಹೌದು..., ಮುಂಬರುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಮೈತ್ರಿ ಪಕ್ಷದಲ್ಲಿ ಎದ್ದಿರುವ ಟಿಕೆಟ್ ದಂಗಲ್ ಹಾಗೂ ಕೈ ಪಾಳೆಯದ ರಣೋತ್ಸಾಹ ರಣಕಣದ ಕುತೂಹಲಕ್ಕೆ ಕಾರಣವಾಗುತ್ತಿದೆ. ಈ ಉಪಚುನಾವಣೆ ಇಬ್ಬರು ಪ್ರಬಲ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಪ್ರತಿಷ್ಠೆಗೆ ಕಾರಣವಾದರೆ,

ಮತ್ತೋರ್ವ ನಾಯಕ ಸಿ.ಪಿ. ಯೋಗೇಶ್ವರ್ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಉಪಚುನಾವಣೆ ಎನಿಸಿದರೂ, ಇದರ ಫಲಿತಾಂಶ ಮಾತ್ರ ನಾಯಕರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವ ವಿಶ್ಲೇಷಣೆ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಪವರ್ ಉಳಿಸಿಕೊಳ್ಳುವ ಸವಾಲು!

HD Kumaraswamy
ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ, ಒಮ್ಮೆ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಮಾಜಿ ಸಿಎಂ ಹಾಗೂ ಪ್ರಸುತ್ತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ತನ್ನ ಮಾಜಿ ಸ್ವ-ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಸವಾಲು ಈ ಚುನಾವಣೆಯಲ್ಲಿದೆ. ಅವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆದು ತಮ್ಮ ಸಾಮರ್ಥ್ಯ ತೋರುವ ಅನಿವಾರ್ಯತೆ ಅವರಿಗೆ ಎದುರಾಗಿದೆ.

ಕಳೆದ ಚುನಾವಣೆಯಲ್ಲಿ ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು, ಕೇಂದ್ರದ ಕ್ಯಾಬಿನೆಟ್ ಸಚಿವರಾಗಿರುವ ಅವರು, ಪ್ರಭಾವಿ ಕೇಂದ್ರ ನಾಯಕ ಎನಿಸಿಕೊಳ್ಳುವ ಜತೆಗೆ, ರಾಜ್ಯದ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಸ್ತಂಭವಾಗಿ ಹೊರಹೊಮ್ಮಿದ್ದಾರೆ. ಪ್ರಮುಖ ಖಾತೆಯೊಂದಿಗೆ ಕೇಂದ್ರದ ಪ್ರಮುಖ ಸ್ಥಾನಗಳನ್ನು ಗಿಟ್ಟಿಸಿಕೊಂಡು, ತನ್ನ ರಾಜಕೀಯ ವಿರೋಧಿಗಳು ಹುಬ್ಬೇರುವಂತೆ ದೆಹಲಿಯಲ್ಲಿ ಮಿಂಚುತ್ತಿರುವ ಕುಮಾರಸ್ವಾಮಿ ಅವರಿಗೆ ಇಮೇಜ್ ಉಳಿಸಿಕೊಳ್ಳಲು ಈ ಚುನಾವಣೆ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ.

ಪವರ್ ಹೆಚ್ಚಿಸಿಕೊಳ್ಳಲು ಹೋರಾಟ!

ಮತ್ತೊಂದೆಡೆ ರಾಜ್ಯದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ತನ್ನ ತವರು ಜಿಲ್ಲೆಯ ಕ್ಷೇತ್ರದಲ್ಲಿ ಗೆಲುವು ಕಾಣಲೇಬೇಕಾದ ಹೊಸ ಸವಾಲು ಎದುರಾಗಿದೆ. ಸಿಎಂ ಕುರ್ಚಿಯ ಮೇಲೆ ಟವಲ್ ಹಾಕಿ, ರಾಜ್ಯದ ಚುಕ್ಕಾಣಿ ಹಿಡಿಯಲು ಆಸೆಗಣ್ಣಿನಿಂದ ಎದುರು ನೋಡುತ್ತಿರುವ ಅವರಿಗೆ, ಈ ಚುನಾವಣೆ ತೀರಾ ಪ್ರತಿಷ್ಠೆಯ ಪ್ರಶ್ನೆ ಎನ್ನಬಹುದು. ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಸಹೋದರನ ಸೋಲು ಅವರ ರಾಜಕೀಯ ವೇಗಕ್ಕೆ ಕೊಂಚ ಬ್ರೇಕ್ ಹಾಕಿದ್ದು, ಈ ಉಪಚುನಾವಣೆಯಲ್ಲಿ ಆ ಕಹಿ ಅಳಿಸಬೇಕಾದ ಅನಿವಾರ್ಯತೆ ಅವರಿಗಿದೆ. ಈ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡರೆ, ತಮ್ಮ ಭವಿಷ್ಯದ ರಾಜಕೀಯಕ್ಕೆ ಮೆಟ್ಟಿಲಾಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.

ಸೈನಿಕನಿಗೆ ಭವಿಷ್ಯದ ಚಿಂತೆ!

ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅಲ್ಲದೆ ಹಾಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಅವರಿಗೂ ತಮ್ಮ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಮಹತ್ತರವಾಗಿದೆ. ಸದ್ಯ ಕಲಾವಿದರ ಕೋಟಾದಡಿಯಲ್ಲಿ ಮೇಲ್ಮನೆ ಸದಸ್ಯರಾಗಿರುವ ಅವರಿಗೆ ಸಾರ್ವತ್ರಿಕ ರಾಜಕಾರಣಕ್ಕೆ ಬರಲು ಇದೊಂದು ಅವಕಾಶವಾಗಿದ್ದು, ಈ ಚುನಾವಣೆಯಲ್ಲಿ ಅವರ ಭವಿಷ್ಯ ಅಡಗಿದೆ ಎನ್ನಬಹುದು. ಇಬ್ಬರು ಘಟಾನುಘಟಿ ರಾಜಕಾರಣಿಗಳ ಜಿದ್ದಿನ ನಡುವೆ, ತನ್ನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅವರು ಸೆಣಸಾಡುತ್ತಿದ್ದಾರೆ.

ಅಳೆದು ತೂಗುತ್ತಿರುವ ನಾಯಕರು!

ತಂತಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುವ ಕಾರಣದಿಂದಲೇ ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಲು ಅಳೆದು ತೂಗುವ ಪ್ರಯತ್ನದಲ್ಲಿ ಎಲ್ಲರೂ ತೊಡಗಿಕೊಂಡಿದ್ದಾರೆ. ಇತ್ತ ಮೈತ್ರಿ ಪಾಳೆಯದಲ್ಲಿ ಟಿಕೆಟ್ ದಂಗಲ್ ಆರಂಭಗೊಳ್ಳಲು ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಅವರ ರಾಜಕೀಯ ಲೆಕ್ಕಾಚಾರಗಳಿದ್ದರೆ.., ಅತ್ತ ಕ್ಷೇತ್ರ ವಶಪಡಿಸಿಕೊಳ್ಳುವ ತಂತ್ರದಿಂದ ಕೈ ಕೂಡ ತನ್ನ ಅಭ್ಯರ್ಥಿ ಘೋಷಿಸದೇ ಕಾಯ್ದು ನೋಡುವ ತಂತ್ರದಲ್ಲಿದೆ. ಒಟ್ಟಾರೆ, ಮುಂಬರುವ ಉಪಕದನ.., ದಿಗ್ಗಜರ ರಾಜಕೀಯ ಯಾನದ ಭವಿಷ್ಯ ನಿರ್ಧರಿಸುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net