ವಿಧಾನಸೌಧ ಮುಂಭಾಗ ಪ್ರತಿಭಟನೆಗೆ ಕಬ್ಬು ಬೆಳೆಗಾರರ ನಿರ್ಧಾರ

Kuruburu Shantakumar (FILEminimizer)
Published on

ಮೈಸೂರು: ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಕಬ್ಬಿನ ಹೆಚ್ಚುವರಿ ದರವನ್ನು ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮಾಸಾಂತ್ಯದೊಳಗೆ ಕೊಡಿಸದೆ ಇದ್ದರೆ ಹಾಗೂ ಪ್ರಸಕ್ತ ಸಾಲಿನ ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ ಮಾಡದಿದ್ದರೆ ಬೆಂಗಳೂರು ವಿಧಾನಸೌಧದ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

ಹೆಚ್ಚುವರಿ ದರಕ್ಕೆ ಒತ್ತಾಯಿಸಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹೋರಾಟ ನಡೆಸಿದ ಸಂದರ್ಭ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 150 ರೂ. ಹೆಚ್ಚುವರಿ ದರ ಘೋಷಿಸಿತ್ತು. ಹೆಚ್ಚುವರಿ ದರಕ್ಕೆ ಸಂಬಂಧಿಸಿದಂತೆ ಒಟ್ಟು 950 ಕೋಟಿ ರೂ. ಹಣ ಬರಬೇಕಾಗಿದ್ದು, ಕೂಡಲೇ ಕೊಡಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರು ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಬೆಳೆ ಒಣಗುತ್ತಿದ್ದು, ಶೇ.40ರಷ್ಟು ಇಳುವರಿ ಕಡಿಮೆಯಾಗಿದೆ. ಕಬ್ಬು ಖರೀದಿಸಲು ಸಕ್ಕರೆ ಕಾರ್ಖಾನೆಗಳು ಪೈಪೋಟಿ ನಡೆಸುತ್ತಿದೆ. ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವ ಕಾರಣ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧಿಸಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಕಳೆದ ವರ್ಷಕ್ಕಿಂತ ಕೇವಲ 100 ರೂ. ದರ ಏರಿಕೆ ಮಾಡಿ ಟನ್ ಕಬ್ಬಿಗೆ 3150 ರೂ. ದರ ನಿಗದಿ ಮಾಡಿರುವುದು ಸರಿಯಲ್ಲ. ಒಂದು ಟನ್ ಕಬ್ಬು ಉತ್ಪಾದನೆಗೆ 3,500 ರೂ.ವೆಚ್ಚವಾಗುತ್ತದೆ ಎಂದು ಕೇಂದ್ರ ಸರ್ಕಾರದ ತಜ್ಞರ ಸಮಿತಿಯೇ ವರದಿ ನೀಡಿದೆ. ಹೀಗಿದ್ದರೂ ಸರ್ಕಾರ ಯಾವ ಮಾನದಂಡದಲ್ಲಿ 3,150 ರೂ.ದರ ನಿಗದಿ ಮಾಡಿದೆಯೋ ತಿಳಿಯದು. ಕಬ್ಬಿಗೆ ಕನಿಷ್ಠ 4,000 ರೂ. ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ಹೆಗ್ಗೂರು ರಂಗರಾಜ್, ಕಾಟೂರು ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net