ಏ.3ರಂದು ನಾಮಪತ್ರ ಸಲ್ಲಿಕೆಗೆ ನಿರ್ಧಾರ

23 ckm 3
ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ನಗರ ಮಂಡಲ ಆಯೋಜಿಸಿದ್ದ ನಮೋ ಯುವ ಚೌಪಾಲ್ 400 ಕುರಿತ ಚರ್ಚೆ ಕಾರ್ಯಕ್ರಮದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸಿ.ಟಿ.ರವಿ, ದೇವರಾಜ ಶೆಟ್ಟಿ, ಪುಷ್ಪರಾಜ್, ಸಂತೋಷ್ ಕೋಟ್ಯಾನ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬಿಜೆಪಿಯ ರಾಜ್ಯ ನಾಯಕರು, ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆಯಂತೆ ಏ.3ರಂದು ನಾಮಪತ್ರ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದು, ಕ್ಷೇತ್ರದ ಪ್ರತಿಯೊಬ್ಬ ಮತದಾರರ ಆಶೀರ್ವಾದವೂ ನನ್ನ ಮೇಲಿರಲಿ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಯುವಮೋರ್ಚಾ ನಗರ ಮಂಡಲ ಆಯೋಜಿಸಿದ್ದ ನಮೋ ಯುವ ಚೌಪಾಲ್ 400 ಕುರಿತ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಇತ್ತೀಚಿನ ವಿದ್ಯಾಮಾನಗಳನ್ನು ನೋಡಿದರೆ ಈ ಲೋಕಸಭೆ ಚುನಾವಣೆ ಸಾಮಾನ್ಯ ಚುನಾವಣೆಯಾಗಿ ಕಾಣುತ್ತಿಲ್ಲ. ಬದಲಾಗಿ ಭಾರತದ ಭವಿಷ್ಯ ಬರೆಯುವ ಚುನಾವಣೆಯಾಗಿದೆ ಎಂದು ಹೇಳಿದರು.
ಸಮರ್ಥ, ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣ ನಮ್ಮ ಹಿರಿಯರ ಕನಸಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ಭಾರತದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು, ಕಾಶ್ಮೀರದಲ್ಲಿ ಉಗ್ರರ ಹಾವಳಿ ತಲೆ ಎತ್ತಿತ್ತು. ಇಂದು ಭಯೋತ್ಪಾದನೆ ನಿರ್ಮೂಲನೆಯತ್ತ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು.
ಭಾರತದ ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟು ಒಂದು ಕಾಲದಲ್ಲಿ ಸಂಕೋಲೆಯಲ್ಲಿದ್ದ ಭಾರತವನ್ನು ಆರ್ಥಿಕ ಸುಧಾರಣೆ ಮಾಡಲಾಗಿದೆ. ಹೀಗಾಗಿ ಭಾರತ ಪ್ರಪಂಚದ ಆರ್ಥಿಕ ಸುಸ್ಥಿತಿಯಲ್ಲಿರುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ದೇಶದ ಸಂರಕ್ಷಣೆ, ಭದ್ರತೆ, ಸ್ವಾಭಿಮಾನದ ವಿಚಾರವಾಗಿ ಪ್ರತಿಯೊಬ್ಬ ನಾಗರಿಕನು ಆಲೋಚಿಸಿ ಮತಚಲಾಯಿಸಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net