

ಸಿದ್ದಾಪುರ: ಪಟ್ಟಣದ ಶರನ್ನವರಾತ್ರಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲು ನಿಶ್ಚಯಿಸಲಾಗಿದ್ದು, ವಿಜಯದಶಮಿ ಸೇರಿ ಹತ್ತು ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.
ಶಂಕರಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 14ರಂದು ಶ್ರೀಮಠದ ಶ್ರೀ ಮಹಾಗಣಪತಿ ಮತ್ತು ಶ್ರೀ ಶಾರದಾಂಬಾ ಸನ್ನಿಧಿಯಲ್ಲಿ ಫಲ ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಪೂಜೆ ಜರುಗಲಿದೆ.
ಅ. 15ರಂದು ಸಪ್ತಶತೀ ಪಾರಾಯಣ, ಉಪನಿಷತ್ ಪಾರಾಯಣ ಪ್ರಾರಂಭವಾಗಲಿದ್ದು, ಮಹಾಗಣಪತಿ ಹವನ ನಡೆಯಲಿದೆ. ಅ. 16ರಿಂದ ಲಲಿತಾಹವನ, ನವಗ್ರಹ ಹವನ, ಅಥರ್ವಶೀರ್ಷ ಹವನ, ಚಂಡೀಹವನ, ದುರ್ಗಾಹವನ, ರುದ್ರಹವನ, ದುರ್ಗಾಷ್ಟಮಿ, ಗುರುಮಂತ್ರಹವನ, ಮಹಾನವಮಿ, ಶ್ರೀಸೂಕ್ತ, ಪುರುಷಸೂಕ್ತ ಹವನ, ವಿಜಯದಶಮಿಯಂದು ಶ್ರೀ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದರು.
16ರಿಂದ 19ರವರೆಗೆ ಹಾಗೂ 22 ಮತ್ತು 24ರಂದು ಪ್ರತಿದಿನ ಸಂಜೆ 6.30ರಿಂದ ಸಂಸ್ಕೃತಿ ಸಂಪದೋತ್ಸವ ನಡೆಯಲಿದೆ. ಅ. 16ರಂದು ಸುಷಿರ ಸಂಗೀತ ಪರಿವಾರದ ಗಾಯಕ ಗಣೇಶ ದೇಸಾಯಿ ಅವರಿಂದ ಸುಗಮ ಹಾಗೂ ಭಕ್ತಿ ಸಂಗೀತ ನಡೆಯಲಿದೆ. ಕಾರ್ತಿಕ ಭಟ್ಟ, ಪ್ರಕಾಶ ಹೆಗಡೆ ಕಲ್ಲಾರೆಮನೆ ಪಾಲ್ಗೊಳ್ಳುವರು.
17ರಂದು ಒಡ್ಡೋಲಗ ರಂಗಪರ್ಯಟನೆಯಿಂದ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ, 18ರಂದು ಶಿರಸಿ ವೀಣಾ ಜೋಶಿ ಕಲಾವೃಂದದವರಿಂದ ಹಿಂದುಸ್ತಾನಿ ಮತ್ತು ಸುಗಮ ಸಂಗೀತ, ಶಿರಸಿ ಪ್ರಜ್ವಲ್ ಟ್ರಸ್ಟ ಕಲಾವಿದರಿಂದ ನೃತ್ಯ ಸಂಜೆ, 19ರಂದು ರಂಗಸೌಗಂಧ ತಂಡದವರಿಂದ 36 ಅಲ್ಲ 63 ನಾಟಕ, 22ರಂದು ಅಶೋಕ ಹುಗ್ಗಣ್ಣನವರ ಗಾಯನ, 24ರಂದು ಬಡಗಿನ ಖ್ಯಾತ ಕಲಾವಿದರ ಸಮಾಗಮದಲ್ಲಿ ಸತ್ಯವಾನ- ಸಾವಿತ್ರಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಶ್ರೀಕಾಂತ ಹೆಗಡೆ ಗುಂಜಗೋಡ, ನಾರಾಯಣ ಹೆಗಡೆ ಕಲ್ಲಾರೆಮನೆ, ಗಣಪತಿ ಹಿತ್ಲಕೈ, ಗಣಪತಿ ಹೆಗಡೆ ಗುಂಜಗೋಡ, ಗಣಪತಿ ಹೆಗಡೆ ಹುಲಿಮನೆ ಇತರರಿದ್ದರು.