ನೌಕರರ ವಿಲೀನ ಸಂಕಷ್ಟ, ವಿಧೇಯಕ ಅಧಿನಿಯಮಕ್ಕೆ ನಿರ್ಧಾರ

Vidhana Soudha
Published on

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಿಗೆ ಸಾರ್ವಜನಿಕ ವಲಯ ಉದ್ಯಮಗಳ ನೌಕರರ ವಿಲೀನ ತಡೆಯುವುದಕ್ಕಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ವಿಲೀನಗೊಳಿಸುವುದಕ್ಕೆ ನಿಷೇಧ) ವಿಧೇಯಕ-2020 ಅಧಿನಿಯಮಿಸಲು ಸರ್ಕಾರ ಮುಂದಾಗಿದೆ.

ಸಾರ್ವಜನಿಕ ವಲಯದ ಸಂಸ್ಥೆಗಳು ವಿವಿಧ ಕಾರಣಕ್ಕೆ ಮುಚ್ಚಲ್ಪಡುತ್ತಿದೆ ಮತ್ತು ಅಂಥ ಸಂಸ್ಥೆಗಳಲ್ಲಿನ ನೌಕರರು ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ತಮ್ಮ ಸೇವೆಗಳನ್ನು ವಿಲೀನಪಡಿಸಬೇಕೆಂದು ಕೋರಿ ಕೋರ್ಟ್ ಮೊರೆ ಹೋಗುತ್ತಿದ್ದಾರೆೆ. ನ್ಯಾಯಾಲಯದಲ್ಲಿನ ಒಂದು ಪ್ರಕರಣದಿಂದ ಸರ್ಕಾರಿ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯ ಉದ್ಯಮಗಳ ನೌಕರರನ್ನು ವಿಲೀನಗೊಳಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಬಳಿಕ ಸಾರ್ವಜನಿಕ ವಲಯದ ಉದ್ಯಮಗಳ ನೌಕರರನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಪೌರ ನಿಗಮಗಳಿಗೆ ವಿಲೀನಗೊಳಿಸುವ ಅನಿವಾರ್ಯತೆ ಎದುರಿಸುತ್ತಿತ್ತು. ಸರ್ಕಾರಿ ನೌಕರರಿಗೆ ಅನ್ವಯವಾಗುವ ನೇಮಕಾತಿ ಮತ್ತು ಸೇವಾ ಷರತ್ತುಗಳು ಮತ್ತು ವೇತನ ಶ್ರೇಣಿಗಳನ್ನು ನಿಯಂತ್ರಿಸುವ ನಿಯಮ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರಿಗೆ ಅನ್ವಯವಾಗುವ ನಿಯಮಗಳಿಗಿಂತ ಭಿನ್ನವಾಗಿರುತ್ತದೆ. ಅನೇಕ ಸಲ ಹೊಂದಿಕೆಯಾಗುವುದಿಲ್ಲ.

ಸಾರ್ವಜನಿಕ ವಲಯದಲ್ಲಿನ ಸಂಸ್ಥೆಗಳ ನೌಕರರ ವಿಲೀನಗೊಳಿಸುವಿಕೆಯು ರಾಜ್ಯದ ಅಭಿವೃದ್ಧಿ ಕಾರ್ಯಕ್ರಮ ಗಳಿಗೆ ತೀವ್ರ ಪರಿಣಾಮ ಉಂಟು ಮಾಡಿ ರಾಜ್ಯದ ಹಣಕಾಸು ಅಪರಿಮಿತವಾಗಿ ಬರದಾಗುವಂತೆ ಮಾಡುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಹೀಗಾಗಿ ವಿಧೇಯಕ ಮಂಡಿಸಿದ್ದು, ಶಾಸಕರ ಅಭಿಪ್ರಾಯ ಪಡೆದು ಅಧಿ ನಿಯಮಿಸಲು ನಿರ್ಧರಿಸಿದೆ.

ಹೌದು- ಇಲ್ಲ ಎನ್ನುವವರೇ ಇಲ್ಲ...

ಬೆಂಗಳೂರು: ವಿವಿಧ ವಿಧೇಯಕಗಳ ಪರ್ಯಾಲೋಚನೆ ವೇಳೆ ಶಾಸಕರ ಕೊರತೆ ವಿಧಾನಸಭೆಯಲ್ಲಿ ಎದ್ದುಕಾಣಿಸಿತು. ಮಂಗಳವಾರ ಬೆಳಗ್ಗೆ ಒಂಬತ್ತು ವಿಧೇಯಕಗಳು ಮಂಡನೆಯಾಗಿದ್ದವು, ಸಂಜೆ ಅವುಗಳನ್ನು ಪರ್ಯಾಲೋಚನೆಗೆ ಕೈಗೆತ್ತಿಕೊಳ್ಳಲಾಯಿತು. ಆದರೆ, ವಿಧೇಯಕದ ಬಗ್ಗೆ ಚರ್ಚೆ ನಡೆಸಲು ಶಾಸಕರ ಕೊರತೆ ಕಾಣಿಸಿತು. ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು ಕೆಲ ಇತರ ಕಾನೂನು (ತಿದ್ದುಪಡಿ) ವಿಧೇಯಕ -2020, ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ-2020, ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ- 2020, ಕನ್ನಡ ವಿಶ್ವವಿದ್ಯಾಲಯ ಮತ್ತು ಇತರ ಕಾನೂನುಗಳ ತಿದ್ದುಪಡಿ ವಿಧೇಯಕಕ್ಕೆ ಚರ್ಚೆ ರಹಿತವಾಗಿ ಅನುಮೋದನೆಯಾಯಿತು. ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ- 2020 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ ಪರ್ಯಾಲೋಚನೆಗೆ ತೆಗೆದುಕೊಂಡಾಗ ಪ್ರತಿಪಕ್ಷದವರು ಆಕ್ಷೇಪಿಸಿ ಹೆಚ್ಚಿನ ಚರ್ಚೆ ಅಗತ್ಯ ಇರುವುದರಿಂದ ಬುಧವಾರ ಪರಿಗಣಿಸಿ ಎಂದು ಪಟ್ಟುಹಿಡಿದರು. ಸರ್ಕಾರ ಅನಿವಾರ್ಯವಾಗಿ ಒಪ್ಪಬೇಕಾಯಿತು. ಪರ್ಯಾಲೋಚನೆ ವೇಳೆ ವಿಧೇಯಕದ ಪರವಾಗಿರುವ ಶಾಸಕರು ಹೌದು ಎಂದೂ, ವಿರುದ್ಧವಾಗಿರುವವರು ಇಲ್ಲ ಎಂದು ಹೇಳುವುದು ಸಂಪ್ರದಾಯ. ಆದರೆ, ಎರಡು ಕಡೆಗಳಲ್ಲಿ ಶಾಸಕರ ಕೊರತೆ ಎದ್ದು ಕಾಣಿಸಿತು. ಇದನ್ನು ಕಂಡ ಶಾಸಕರು ಹೌದು ಎನ್ನಲೂ ಯಾರೂ ಇಲ್ಲ, ಇಲ್ಲ ಎನ್ನವವರೂ ಇಲ್ಲ ಎಂದರು.

ಮಂಡನೆಯಾದ ವಿಧೇಯಕಗಳು

  1. ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನ ಗಳು ಮತ್ತು ಭತ್ಯೆಗಳು ಹಾಗೂ ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2020

2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ತಿದ್ದುಪಡಿ) ವಿಧೇಯಕ, 2020

3. ಕರ್ನಾಟಕ ಪೌರ ಸಭೆಗಳ (ತಿದ್ದುಪಡಿ) ವಿಧೇಯಕ, 2020

4. ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕ, 2020

5. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ವಿಧೇಯಕ, 2020

6. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2020

7. ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ, 2020

8. ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ, 2020

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net