ಮೈಸೂರು- ಸಿನ್ಸಿನ್ನಾಟಿ ನಗರಗಳ ನಡುವೆ ಸಾಂಸ್ಕೃತಿಕ ವಿನಿಮಯಕ್ಕೆ ನಿರ್ಧಾರ

Decision for cultural exchange between Mysore-Cincinnati cities
Published on

ಮೈಸೂರು: ದಶಕದ ಹಿಂದೆ ನಗರಪಾಲಿಕೆ ಹಾಗೂ ಅಮೆರಿಕದ ಸಿನ್ಸಿನ್ನಾಟಿ ನಗರದ ದಿ ಇಂಡಿಯಾ ಸಿಸ್ಟರ್ ಸಿಟಿ ಅಸೋಸಿಯೇಷನ್ ನಡುವೆ ನಡೆದ ಒಡಂಬಡಿಕೆ ಪ್ರಕಾರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಮುಂದುವರಿಸಲು ಶುಕ್ರವಾರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ದಿ ಇಂಡಿಯಾ ಸಿಸ್ಟರ್ ಸಿಟಿ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷೆ ಡಾ.ರತಿ ಅಪ್ಪಣ್ಣ ಮಾತನಾಡಿ, ವಿಶ್ವದ ಹಲವು ನಗರಗಳೊಂದಿಗೆ ನಮ್ಮ ಸಂಘ ಸಂಬಂಧ ಹೊಂದಿದೆ. ಸಾಂಸ್ಕೃತಿಕ, ಶೈಕ್ಷಣಿಕ, ಕಾನೂನು ಹಾಗೂ ಕ್ರೀಡಾ ವಿನಿಮಯ ಚಟುವಟಿಕೆಗಳಲ್ಲಿ ನಮ್ಮ ಸಂಘ ತೊಡಗಿಕೊಂಡಿದ್ದು, ಈ ಚಟುವಟಿಕೆಯನ್ನು ಮೈಸೂರಿಗೂ ವಿಸ್ತರಿಸಲಾಗಿದೆ ಎಂದರು.

ಮೇಯರ್ ಶಿವಕುಮಾರ್ ಮಾತನಾಡಿ, ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಿಸಿದಂತೆ ಸಂಘದೊಂದಿಗೆ 2013ರಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ. ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ವಿನಿಮಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ನಗರದ ಅಭಿವೃದ್ಧಿಯ ದೃಷ್ಟಿಕೋನದಿಂದ ತಂತ್ರಜ್ಞಾನಗಳನ್ನು ಹಂಚಿಕೊಳ್ಳುವ ಕುರಿತು ಚಿಂತನೆ ನಡೆಸುವ. ಅದೇ ರೀತಿ ನಗರದಲ್ಲಿ ಗುಡಿ ಕೈಗಾರಿಕೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಸಿನ್ಸಿನ್ನಾಟಿ ನಗರದಲ್ಲಿ ಮಾರುಕಟ್ಟೆ ಒದಗಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ದೆಹಲಿ ಹಾಗೂ ಬೆಂಗಳೂರು ರೀತಿಯಲ್ಲಿ ಮೈಸೂರಿನಲ್ಲಿ ವಾಯು ಮಾಲಿನ್ಯ ಆಗದಂತೆ ಎಚ್ಚರ ವಹಿಸಬೇಕಾಗಿದೆ. ವಾಯು ಮಾಲಿನ್ಯ ತಡೆಗೆ ತಾಂತ್ರಿಕ ಸಹಯೋಗ ಪಡೆಯಬಹುದಾಗಿದ್ದು, ಇದಕ್ಕೆ ಪೂರಕವಾಗಿ ಕೆಲಸ ಮಾಡೋಣ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ರಂಜಿತ್ ಕುಮಾರ್, ಆರೋಗ್ಯಾಧಿಕಾರಿ ಡಾ.ನಾಗರಾಜ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net