

ಭಾಲ್ಕಿ: ಡಾ.ಚನ್ನಬಸವ ಪಟ್ಟದ್ದೇವರ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಆಶಯದಂತೆ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಪ್ರತಿ ವರ್ಷದಂತೆ ಈ ಬಾರಿಯೂ ಸರ್ವರ ಸಹಕಾರ, ಪ್ರೋತ್ಸಾಹದಿಂದ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಬಸವ ಜಯಂತಿ ಅಂಗವಾಗಿ ಹಳೇ ಭಾಲ್ಕಿಯ ಹಿರೇಮಠದಲ್ಲಿ ಬುಧವಾರ ಕರೆದ ಪೂರ್ವಭಾವಿ ಸಭೆಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಮಾಹಿತಿಯುಳ್ಳ ಕರಪತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಮನುಕುಲದ ಉದ್ಧಾರಕರು ಹೌದು. ಬಸವಣ್ಣನವರೇ ನಮ್ಮ ಧರ್ಮಗುರು, ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ ಎಂದು ಅಂತರಬಾಹ್ಯವಾಗಿ ನಂಬಿ, ನಡೆ-ನುಡಿಯಲ್ಲಿ ಬಸವ ತತ್ವದ ನಿಜಾಚರಣೆಗಳನ್ನು ಜನಸಾಮಾನ್ಯರಲ್ಲಿ ತರುವ ಸದುದ್ದೇಶದಿಂದ ಬುಧವಾರದಿಂದ ಶುಕ್ರವಾರದವರೆಗೆ ಮೂರು ದಿವಸಗಳ ಕಾಲ ಬಸವ ಜಯಂತಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಶುಕ್ರವಾರ ಹಿರೇಮಠ ಸಂಸ್ಥಾನದಿಂದ ಆರಂಭಗೊಂಡ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಗಡಿಗಣೇಶ, ಬಸ್ ನಿಲ್ದಾಣ,ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಚನ್ನಬಸವಾಶ್ರಮದಲ್ಲಿ ಸಮಾವೇಶಗೊಳ್ಳುವುದು. ಮೆರವಣಿಗೆಯಲ್ಲಿ ಎಲ್ಲ ಬಸವ ಭಕ್ತರು ಶ್ವೇತ ವಸ್ತ್ರಧಾರಿಗಳಾಗಿ ಕೈಯಲ್ಲಿ ಆಯಾತಕಾರದ ಷಟಸ್ಥಲ ಧ್ವಜ ಹಿಡಿದು ಭಾಗವಹಿಸಬೇಕು ಎಂದರು.
ಪ್ರಮುಖರಾದ ಕಿರಣಕುಮಾರ ಖಂಡ್ರೆ, ಜಗದೀಶ ಖಂಡ್ರೆ, ಸಿದ್ರಾಮಪ್ಪ ವಂಕೆ, ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ್, ಪ್ರಕಾಶ ಮಾಶಟ್ಟೆ, ಪ್ರಭು ಡಿಗ್ಗೆ, ಬಸವರಾಜ ಮರೆ, ಡಾ.ಜಗದೀಶ ಭೂರೆ, ಮಲ್ಲಮ್ಮ ಪಾಟೀಲ್ ಮಾತನಾಡಿದರು.
ಸೋಮನಾಥಪ್ಪ ಅಷ್ಟೂರೆ, ಶಂಭುಲಿಂಗ ಕಾಮಣ್ಣ , ಕಪಿಲ ಕಲ್ಯಾಣೆ, ಸಂಗಮೇಶ ಕಾರಾಮುಂಗೆ, ಶರಣಪ್ಪ ಬಿರಾದಾರ, ವಿಜಯಕುಮಾರ ಪಾಟೀಲ್, ಗಣಪತಿ ಬಾವುಗೆ, ಶಿವು ಪೆದ್ದೆ ಇತರರಿದ್ದರು.
ವೀರಣ್ಣ ಕುಂಬಾರ ಪ್ರಾರ್ಥನೆ ಗೀತೆ. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಡಾ.ಅಮಿತ ಅಷ್ಟೂರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ: ಬಸವ ಜಯಂತಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸಿದ್ರಾಮಪ್ಪ ವಂಕೆ, ಕಾರ್ಯಾಧ್ಯಕ್ಷರಾಗಿ ಶಿವು ಲೋಖಂಡೆ, ಅಧ್ಯಕ್ಷರಾಗಿ ಡಾ.ಅಮಿತ ಅಷ್ಟೂರೆ, ಉಪಾಧ್ಯಕ್ಷರಾಗಿ ಪ್ರಕಾಶ ಮಾಶಟ್ಟೆ, ಜಗದೀಶ ಖಂಡ್ರೆ, ಆಕಾಶ ರಿಕ್ಕೆ, ಅಶೋಕ ಬಾವಗೆ, ಚಂದ್ರಕಾಂತ ಪಾಟೀಲ್ ಹಾಗೂ ಮಹಿಳಾ ಪ್ರತಿನಿಧಿಗಳಾಗಿ ಚಂದ್ರಕಲಾ ಡಿಗ್ಗಿ,ಮಲ್ಲಮ್ಮ ಪಾಟೀಲ್, ಪಾರ್ವತಿ ಡೊಣಗಾಪುರೆ, ಪಾರ್ವತಿ ಧುಮನಸೂರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ವಿವಿಧ ಸಮಿತಿಗಳ ರಚನೆ: ನಗರ ಅಲಂಕಾರ: ಕಿರಣಕುಮಾರ ಖಂಡ್ರೆ, ಶರಣು ವಂಕೆ,ಮಾAತೇಶ ದಶಮುಖೆ. ಮೆರವಣಿಗೆ: ಜಗದೀಶ ಖಂಡ್ರೆ, ಚಂದ್ರಶೇಖರ ಎಮ್ಮೆ, ಜಯರಾಜ ಪಾತ್ರೆ, ಆಹ್ವಾನ ಸಮಿತಿ: ನ್ಯಾಯವಾದಿ ಉಮಾಕಾಂತ ವಾರದ, ಸಂತೋಷ ಪಾಟೀಲ್, ಸಂತೋಷ ಹಡಪದ, ಗುಂಡಪ್ಪ ಸಂಗಮಕರ, ಮಹೇಶ ವಾರದ, ಸಂಗಮೇಶ ವಾಲೆ.